ಮಂಗಳೂರು, ಎಪ್ರಿಲ್ 11, 2021 (ಕರಾವಳಿ ಟೈಮ್ಸ್) : ಕೋವಿಡ್ 2ನೇ ಅಲೆ ಹೆಚ್ಚುತಿರುವ ಹಿನ್ನಲೆಯಲ್ಲಿ ರಾಜ್ಯ ಸರಕಾರದ ರಾಜ್ಯಾದ್ಯಂತ 8 ಜಿಲ್ಲಾ ಕೇಂದ್ರಗಳಲ್ಲಿ ಶನಿವಾರದಿಂದ ರಾತ್ರಿ ಕಫ್ರ್ಯೂ ಜಾರಿಗೊಳಿಸಿದ್ದು, ಮಂಗಳೂರಿನಲ್ಲೂ ಇದು ನಿನ್ನೆ ಚಾಲನೆಗೊಂಡಿರುವ ಹಿನ್ನಲೆಯಲ್ಲಿ ಪೊಲೀಸರು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿ ಆದೇಶದಂತೆ ಪ್ರಮುಖ ಸ್ಥಳಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ಚೆಕ್ ಪೋಸ್ಟ್ ನಿರ್ಮಿಸಿ ವಾಹನ ಸವಾರರನ್ನು ಬೆವರಿಳಿಸುತ್ತಿದ್ದರು.
ಈ ಸಂದರ್ಭ ಕಾರ್ಯಕ್ರಮ ಮುಗಿಸಿ ಹೆದ್ದಾರಿ ಮೂಲಕ ಬರುತ್ತಿದ್ದ ಮಾಜಿ ಸಚಿವ ಬಿ ರಮಾನಾಥ ರೈ ಅವರು ಮಂಗಳೂರು ಹೊರ ವಲಯದ ಪಡೀಲ್ ಬಳಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ವಾಹನಗಳನ್ನು ತಡೆ ಹಿಡಿದ ಪರಿಣಾಮ ಟ್ರಾಫಿಕ್ ಜಾಂ ಉಂಟಾಗಿತ್ತು. ಅಗತ್ಯ ಕಾರ್ಯಗಳಿಗೆ ಹಾಗೂ ಮನೆ ಸೇರಲು ತೆರಳುತ್ತಿದ್ದ ಸಾರ್ವಜನಿಕರು ಪೊಲೀಸರ ಅನಗತ್ಯ ಪ್ರಶ್ನೆಗಳಿಂದಾಗಿ ಅತ್ತ ಮುಂದೆ ಸಂಚರಿಸಲೂ ಆಗದೆ, ಇತ್ತ ನಿಲ್ಲಲೂ ಆಗದ ಪರಿಸ್ಥಿತಿ ಎದುರಿಸಿ ಅಡಕತ್ತರಿಯಲ್ಲಿ ಸಿಲುಕಿ ಒದ್ದಾಡುತ್ತಿರುವುದನ್ನು ಕಂಡು ತನ್ನ ಕಾರು ನಿಲ್ಲಿಸಿ, ಕಾರಿನಿಂದ ಇಳಿದು ಪೊಲೀಸರನ್ನು ತೀವ್ರ ತರಾಟೆಗೆಳೆದರಲ್ಲದೆ ಸ್ವತಃ ಟ್ರಾಫಿಕ್ ಕ್ಲಿಯರ್ ಮಾಡಿ ವಾಹನ ಸವಾರರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ಸಕತ್ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಈ ಸಂದರ್ಭ ಪೊಲೀಸರು ಕ್ಲಾಸ್ ತೆಗೆದುಕೊಂಡ ರಮಾನಾಥ ರೈ, ಸರಕಾರದ ಆದೇಶ ಪಾಲನೆಯ ಜೊತೆಗೆ ಸಾರ್ವಜನಿಕ ಸ್ನೇಹಿಯಾಗಿ ಕಾರ್ಯನಿರ್ವಹಿಸಿ. ವಿನಾ ಕಾರಣ ಅಗತ್ಯ ಕಾರ್ಯಗಳಿಗೆ ಬರುವ ಸಾರ್ವಜನಿಕರೊಂದಿಗೆ ಉಡಾಫೆ ಹಾಗೂ ನಿರ್ದಯವಾಗಿ ವರ್ತಿಸದೆ ಮೃದುವಾಗಿ ವರ್ತಿಸುವ ಮೂಲಕ ಸರಕಾರದ ಆದೇಶಕ್ಕೆ ಬೆಲೆ ನೀಡುವುದರ ಜೊತೆಗೆ ಸಾರ್ವಜನಿಕರ ಭಾವನೆಗಳಿಗೂ ಬೆಲೆ ನೀಡಿ ಎಂದರಲ್ಲದೆ ಸರಕಾರ ಹಾಗೂ ನೀತಿ-ನಿಯಮ ರೂಪಿಸಿದ ಸರಕಾರದ ಭಾಗವಾಗಿರುವ ಮಂದಿಗಳೇ ನಿಯಮಗಳನ್ನು ಗಾಳಿಗೆ ತೂರುತ್ತಿರುವಾಗ ಎಲ್ಲಾ ನಿಯಮಗಳನ್ನೂ ಜನರ ಮೇಲೆ ಬಲವಂತವಾಗಿ ಹೇರಿ ದೊರೆಗಳ ಕೃಪಾಕಟಾಕ್ಷ ಗಿಟ್ಟಿಸುವಾಗ ಜನರ ಹಿತ ಬಲಿಕೊಡದಿರಿ ಎಂದು ಸಲಹೆ ನೀಡಿದರು.
0 comments:
Post a Comment