ಮುಂಬೈ, ಎಪ್ರಿಲ್ 16, 2021 (ಕರಾವಳಿ ಟೈಮ್ಸ್) : ಕ್ರಿಸ್ ಮೋರಿಸ್ ಅಬ್ಬರಕ್ಕೆ ನಲುಗಿದ ಡೆಲ್ಲಿ ಕ್ಯಾಪಿಟಲ್ ಕೊನೆ ಹಂತದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಮುಂದೆ ಮಂಡಿಯೂರಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ 3 ವಿಕೆಟ್‍ಗಳ ರೋಚಕ ಜಯ ಸಾಧಿಸಿದೆ.
ಗುರುವಾರ ರಾತ್ರಿ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 148 ರನ್‍ಗಳ ಗುರಿ ಪಡೆದ ರಾಜಸ್ಥಾನ ರಾಯಲ್ಸ್ ತಂಡ ಒಂದು ಹಂತದಲ್ಲಿ ಸಂಪೂರ್ಣ ಸೋಲಿನ ಸುಳಿಗೆ ಸಿಲುಕಿ ಒದ್ದಾಡುತ್ತಿತ್ತು. ಆದರೆ ದಕ್ಷಿಣ ಆಫ್ರಿಕಾದ ಆಟಗಾರರಾದ ಡೆವಿಡ್ ಮಿಲ್ಲರ್ ಮತ್ತು ಕ್ರೀಸ್ ಮೋರಿಸ್ ಅವರ ಸ್ಫೋಟಕ ಆಟದಿಂದಾಗಿ 19.4 ಓವರಿನಲ್ಲಿ 7 ವಿಕೆಟ್ ನಷ್ಟಕ್ಕೆ 150 ರನ್ ಹೊಡೆಯುವ ಮೂಲಕ ರಾಜಸ್ಥಾನ ತನ್ನ ಗೆಲುವಿನ ಖಾತೆ ತೆರೆದಿದೆ.
42 ರನ್‍ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದಾಗ ರಾಹುಲ್ ತೆವಾಟಿಯಾ 19 ರನ್ ಹೊಡೆದರೆ ಡೇವಿಡ್ ಮಿಲ್ಲರ್ 62 ರನ್ (43 ಎಸೆತ, 7 ಬೌಂಡರಿ, 2 ಸಿಕ್ಸರ್) ಹೊಡೆದು ಪಂದ್ಯವನ್ನು ರೋಚಕ ಘಟ್ಟದತ್ತ ತಿರುಗಿಸಿದರು. ಕೊನೆಯ 12 ಎಸೆತಗಳಲ್ಲಿ ರಾಜಸ್ಥಾನ ಗೆಲುವಿಗೆ 27 ರನ್‍ಗಳ ಅಗತ್ಯವಿತ್ತು. ರಬಾಡ ಎಸೆದ 19ನೇ ಓವರಿನಲ್ಲಿ ಕ್ರೀಸ್ ಮೋರಿಸ್ 2 ಸಿಕ್ಸ್ ಸಿಡಿಸಿದರು. ಈ ಓವರಿನಲ್ಲಿ 15 ರನ್ ಬಂತು. ಕೊನೆಯ ಓವರಿನಲ್ಲಿ 12 ರನ್ ಬೇಕಿತ್ತು. ಟಾಮ್ ಕರ್ರನ್ ಎಸೆದ ಮೊದಲ ಎಸೆತದಲ್ಲಿ ಮೋರಿಸ್ ಎರಡು ರನ್ ಓಡಿದರೆ ಎರಡನೇ ಎಸೆತವನ್ನು ಸಿಕ್ಸರ್‍ಗೆ ಅಟ್ಟಿದರು. 3ನೇ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. 4ನೇ ಎಸೆತದಲ್ಲಿ ಮತ್ತೆ ಸಿಕ್ಸರ್ ಸಿಡಿಸಿದ ಮೋರಿಸ ತಂಡಕ್ಕೆ ಅಮೋಘ ಜಯ ತಂದುಕೊಟ್ಟರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತ್ತು. 37 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತ್ತು. ವಿಕೆಟ್ ಉರುಳುತ್ತಿದ್ದರೂ ನಾಯಕ ರಿಷಭ್ ಪಂತ್ 51 ರನ್ (32 ಎಸೆತ, 9 ಬೌಂಡರಿ) ಹೊಡೆದರೆ ಲಲಿತ್ ಯಾದವ್ 20 ರನ್, ಟಾಪ್ ಕರ್ರನ್ 21 ರನ್, ಕ್ರೀಸ್ ವೋಕ್ಸ್ 15 ರನ್ ಅವರ ಪ್ರದರ್ಶನದಿಂದಾಗಿ ಅಂತಿಮವಾಗಿ 8 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತು. ಈ ಪಂದ್ಯದಲ್ಲಿ ಡೆಲ್ಲಿ ಪರ ಯಾವೊಬ್ಬ ಆಟಗಾರ ಒಂದೇ ಒಂದು ಸಿಕ್ಸರ್ ಸಿಡಿಸಲು ವಿಫಲರಾದರು.
ಕ್ರೀಸ್ ಮೋರಿಸ್ ಅವರು ಈ ಬಾರಿಯ ಐಪಿಎಲ್ ಹರಾಜಿನಲ್ಲಿ ದುಬಾರಿ ಬೆಲೆಗೆ ಅಂದರೆ ಬರೋಬ್ಬರಿ 16.25 ಕೋಟಿ ರೂಪಾಯಿಗೆ ರಾಜಸ್ಥಾನ ರಾಯಲ್ಸ್ ಪರ ಬಿಡ್ ಆಗಿದ್ದರು. ಮೋರಿಸ್ ಬೌಲರ್ ಮಾತ್ರವಾಗಿರದೆ ಓರ್ವ ಉತ್ತಮ ಆಲ್‍ರೌಂಡರ್ ಆಟಗಾರ. ಗುರುವಾರದ ಪಂದ್ಯದಲ್ಲಿ ಮೋರಿಸ್ 3 ಓವರ್ ಬೌಲ್ ಮಾಡಿ 27 ರನ್ ನೀಡಿ 1 ವಿಕೆಟ್ ಪಡೆದಿದ್ದರು.
0 comments:
Post a Comment