ಬೆಂಗಳೂರು, ಎಪ್ರಿಲ್ 24, 2021 (ಕರಾವಳಿ ಟೈಮ್ಸ್) : ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅಜೇಯ ಓಟ ಮುಂದುವರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯಾವುದೇ ತಂಡ ಮಾಡದ ಅಪರೂಪದ ದಾಖಲೆಯೊಂದನ್ನು ನಿರ್ಮಿಸಿ ಸುದ್ದಿಯಾಗಿದೆ.
13 ಆವೃತ್ತಿಗಳನ್ನು ಯಶಸ್ವಿಯಾಗಿ ಮುಗಿಸಿರುವ ಐಪಿಎಲ್ ಕೂಟದಲ್ಲಿ ಹಲವು ದಾಖಲೆಗಳು ನಿರ್ಮಾಣಗೊಂಡಿದೆ. ಈ ಪೈಕಿ ಪ್ರಶಸ್ತಿ ಗೆಲ್ಲಲು ವಿಫಲಗೊಂಡಿದೆಯಾದರೂ ಬೆಂಗಳೂರು ತಂಡ ಅಪರೂಪದ ದಾಖಲೆ ನಿರ್ಮಿಸಿದೆ. ತಂಡವೊಂದು ಅತೀ ಹೆಚ್ಚು ಶತಕ ಬಾರಿಸಿದ ಕೀರ್ತಿ ಇದೀಗ ಬೆಂಗಳೂರು ಪಾಲಾಗಿದೆ. ಐಪಿಎಲ್ ಕೂಟದಲ್ಲಿ ಬೆಂಗಳೂರು ಪರ ಆಡಿದ ಆಟಗಾರರು ಅತೀ ಹೆಚ್ಚು ಅಂದರೆ 14 ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.
2008 ರಿಂದ ಪ್ರಾರಂಭವಾದ ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಆರ್‍ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಆರ್‍ಸಿಬಿ ಪರ 5 ಶತಕ ಸಿಡಿಸಿದರೆ. ಅದೇ ತಂಡದಲ್ಲಿದ್ದ ಕ್ರೀಸ್ ಗೇಲ್ 4 ಶತಕ, ಎಬಿಡಿ ವಿಲಿಯರ್ಸ್ 3 ಶತಕ, ಮನೀಶ್ ಪಾಂಡೆ 1 ಶತಕ ಮತ್ತು ದೇವದತ್ ಪಡಿಕ್ಕಲ್ 1 ಶತಕ ಬಾರಿಸಿ ಒಟ್ಟು 14 ಶತಕ ಬಾರಿಸುವ ಮೂಲಕ ಅಗ್ರಸ್ಥಾನದಲ್ಲಿದೆ.
ಬಳಿಕದ ಸ್ಥಾನ 11 ಶತಕ ಸಿಡಿಸಿರುವ ಪಂಜಾಬ್ ತಂಡ ಪಡೆದುಕೊಂಡಿದೆ. ಪಂಜಾಬ್ ಪರ ಕ್ರೀಸ್ ಗೇಲ್ ಮತ್ತು ಆಶಿಮ್ ಆಮ್ಲ ತಲಾ 2 ಶತಕ ಬಾರಿಸಿದರೆ, ಶಾನ್ ಮಾರ್ಷ್, ಮಹೇಲಾ ಜಯವರ್ಧನೆ, ಪೌಲ್ ವಾಲ್‍ತಾಟಿ, ಆಡಮ್ ಗಿಲ್‍ಕ್ರಿಸ್ಟ್, ಡೇವಿಡ್ ಮಿಲ್ಲರ್, ವಿರೇಂದ್ರ ಸೆಹ್ವಾಗ್, ವೃದ್ದಿಮಾನ್ ಸಹಾ, ಮತ್ತು ಕೆ.ಎಲ್ ರಾಹುಲ್ ತಲಾ ಒಂದು ಶತಕ ಸಿಡಿಸುವ ಮೂಲಕ ಪಂಜಾಬ್ ತಂಡ ಒಟ್ಟು 11 ಶತಕಗಳ ಸಾಧನೆ ಮಾಡಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದುಕೊಂಡಿದ್ದು, 6 ಆಟಗಾರರು ಚೆನ್ನೈ ಪರ ಶತಕ ಸಿಡಿಸಿದ್ದಾರೆ. ಚೆನ್ನೈ ತಂಡದ ಆಟಗಾರರು ಒಟ್ಟು 8 ಶತಕಗಳನ್ನು ಸಿಡಿಸಿದ್ದಾರೆ.
ನಂತರದ ಸ್ಥಾನ ಡೆಲ್ಲಿ ತಂಡ ಪಡೆದುಕೊಂಡಿದ್ದು, 7 ಶತಕ ಸಿಡಿಸಿದೆ. ರಾಜಸ್ಥಾನ ತಂಡ 6 ಶತಕ, ಮುಂಬೈ ತಂಡ 4 ಶತಕ ಹಾಗೂ ಹೈದರಾಬಾದ್ ತಂಡದ ಪರ 3 ಶತಕಗಳು ದಾಖಲಾಗಿದೆ.
0 comments:
Post a Comment