ಚೆನ್ನೈ, ಎಪ್ರಿಲ್ 18, 2021 (ಕರಾವಳಿ ಟೈಮ್ಸ್) : ಕಲಾತ್ಮಕ ಹಾಗೂ ಸ್ಫೋಟಕ ದಾಂಡಿಗರಾದ ಎಬಿಡಿ ವಿಲಿಯರ್ಸ್ ಹಾಗೂ ಗ್ಲೆನ್ ಮ್ಯಾಕ್ಸ್‍ವೆಲ್ ಅವರ ಮನಮೋಹಕ ಆಟದಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭಾನುವಾರ ಸಂಜೆ ಇಲ್ಲಿನ ಮೈದಾನದಲ್ಲಿ ನಡೆದ ಐಪಿಎಲ್ 14ನೇ ಆವೃತ್ತಿಯ ವೀಕೆಂಡ್ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 38 ರನ್‍ಗಳ ಗೆಲುವು ದಾಖಲಿಸಿ ಟೂರ್ನಿಯಲ್ಲಿ ಸತತ 3ನೇ ಜಯ ಪಡೆದಿದೆ.
ಗೆಲುವಿಗಾಗಿ 205 ರನ್‍ಗಳ ಕಠಿಣ ಸವಾಲು ಪಡೆದ ಕೋಲ್ಕತ್ತಾ 20 ಓವರ್‍ಗಳಲ್ಲಿ 8 ವಿಕೆಟ್ ಕಳೆದುಕೊಂಡು 166 ರನ್ ಗಳಿಸಲಷ್ಟೆ ಶಕ್ತವಾಗಿ 38 ರನ್‍ಗಳಿಂದ ಶರಣಾಯಿತು. ಕೋಲ್ಕತ್ತಾ ಪರವಾಗಿ ಆಂಡ್ರೆ ರಸೆಲ್ ಹೊರತುಪಡಿಸಿ ಉಳಿದ ದಾಂಡಿಗರಾರೂ ಪರಿಣಾಮಕಾರಿ ಪ್ರದರ್ಶನ ನೀಡಿಲ್ಲ. ಈ ಗೆಲುವಿನೊಂದಿಗೆ ಆರ್.ಸಿ.ಬಿ. ಸತತ ಮೂರು ಪಂದ್ಯಗಳನ್ನು ಗೆದ್ದುಕೊಂಡು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ. ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆರ್ಸಿಬಿ ಮೊದಲ 3 ಪಂದ್ಯಗಳನ್ನು ಗೆದ್ದುಕೊಂಡಿದೆ.
ರಸೆಲ್ 31 ರನ್ (20 ಎಸೆತ, 3 ಬೌಂಡರಿ, 2 ಸಿಕ್ಸರ್) ಭಾರಿಸಿದರೆ, ನಿತೀಶ್ ರಾಣಾ 18 ರನ್, ಶುಭಮನ್ ಗಿಲ್ 21 ರನ್, ರಾಹುಲ್ ತ್ರಿಪಾಠಿ 25 ರನ್, ಇಯಾನ್ ಮೊರ್ಗನ್ 29 ರನ್, ಶಕಿಬ್ ಉಲ್ ಹಸನ್ 26 ರನ್ ಹೊಡೆದರು. ಆರ್.ಸಿ.ಬಿ. ಪರ ಕೈಲ್ ಜೆಮಿಸನ್ 3 ವಿಕೆಟ್ ಕಿತ್ತರೆ, ಹರ್ಷಲ್ ಪಟೇಲ್ ಮತ್ತು ಯಜುವೇಂದ್ರ ಚಹಲ್ ತಲಾ 2 ವಿಕೆಟ್ ಪಡೆದರು. ವಾಷಿಂಗ್ಟನ್ ಸುಂದರ್ 1 ವಿಕೆಟ್ ಪಡೆದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು 9 ರನ್ ಗಳಿಸುವಷ್ಟರಲ್ಲಿ ವಿರಾಟ್ ಕೊಹ್ಲಿ ಮತ್ತು ರಜತ್ ಪಟೀದಾರ್ ಅವರ ವಿಕೆಟ್ ಕಳೆದುಕೊಂಡಿತ್ತು. ಮೂರನೇ ವಿಕೆಟಿಗೆ ದೇವದತ್ ಪಡಿಕ್ಕಲ್ ಮತ್ತು ಗ್ಲೆನ್ ಮ್ಯಾಕ್ಸ್‍ವೆಲ್ 58 ಎಸೆತಗಳಲ್ಲಿ 86 ರನ್ ಜೊತೆಯಾಟವಾಡಿ ಚೇತರಿಕೆ ಪ್ರದರ್ಶನ ನೀಡಿದರು. 4ನೇ ವಿಕೆಟಿಗೆ ಮ್ಯಾಕ್ಸ್‍ವೆಲ್ ಹಾಗೂ ಎಬಿ ಡಿವಿಲಿಯರ್ಸ್ 37 ಎಸೆತಗಳಲ್ಲಿ 53 ರನ್ ಭಾರಿಸಿದರೆ, ಕೊನೆಯಲ್ಲಿ ಮುರಿಯದ 5ನೇ ವಿಕೆಟಿಗೆ ಎಬಿಡಿ ಮತ್ತು ಜೆಮಿಸನ್ 20 ಎಸೆತಗಳಲ್ಲಿ 56 ರನ್ ಸಿಡಿಸಿ ತಂಡದ ಮೊತ್ತವನ್ನು 200 ರನ್‍ಗಳ ಗಡಿ ದಾಟಿಸಿದರು.
ದೇವದತ್ತ ಪಡಿಕ್ಕಲ್ 25 ರನ್ (28 ಎಸೆತ, 2 ಬೌಂಡರಿ), ಗ್ಲೇನ್ ಮ್ಯಾಕ್ಸ್‍ವೆಲ್ 78 ರನ್ (49 ಎಸೆತ, 9 ಬೌಂಡರಿ, 3 ಸಿಕ್ಸರ್) ಎಬಿಡಿ ವಿಲಿಯರ್ಸ್ 76 ರನ್ (34 ಎಸೆತ, 9 ಬೌಂಡರಿ, 3 ಸಿಕ್ಸರ್) ಜೇಮಿಸನ್ 11 ರನ್ (4 ಎಸೆತ, 1 ಬೌಂಡರಿ, 1 ಸಿಕ್ಸರ್) ಹೊಡೆದರು. ರಸೆಲ್ ಎಸೆದ 18ನೇ ಓವರಿನಲ್ಲಿ 17 ರನ್, ಹರ್ಭಜನ್ ಎಸೆದ 19ನೇ ಓವರಿನಲ್ಲಿ 18 ರನ್, ರಸೆಲ್ ಎಸೆದ 20ನೇ ಓವರಿನಲ್ಲಿ 21 ರನ್ ಬಂದ ಕಾರಣ ಆರ್‍ಸಿಬಿ ದ್ವಿಶತಕದ ಗಡಿ ದಾಟಿತ್ತು.
0 comments:
Post a Comment