ಚೆನ್ನೈ, ಎಪ್ರಿಲ್ 14, 2021 (ಕರಾವಳಿ ಟೈಮ್ಸ್) : ಇಲ್ಲಿನ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ತಂಡವನ್ನು ರೋಚಕ ಆರು ರನ್‍ಗಳ ಅಂತರದಿಂದ ಮಣಿಸಿದ ಆರ್.ಸಿ.ಬಿ. ಕೂಟದಲ್ಲಿ ಸತತ ಎರಡನೇ ಗೆಲುವು ದಾಖಲಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಗದಿತ 20 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 149 ರನ್ ಕಲೆ ಹಾಕಿತು. ಆರ್.ಸಿ.ಬಿ ಪರ ಗ್ಲೆನ್ ಮ್ಯಾಕ್ಸ್‍ವೆಲ್ ಆಕರ್ಷಕ 59 (41 ಎಸೆತ, 5 ಬೌಂಡರಿ, 2 ಸಿಕ್ಸರ್), ನಾಯಕ ವಿರಾಟ್ ಕೊಹ್ಲಿ 33 (29 ಎಸೆತ, 4 ಬೌಂಡರಿ), ಶಹಬಾಜ್ ಅಹ್ಮದ್ 14 ರನ್ (10 ಎಸೆತ, 1 ಸಿಕ್ಸರ್) ಗಳಿಸಿದರು. ಸನ್ ರೈಸರ್ಸ್ ಹೈದ್ರಾಬಾದ್ ಪರ ಜೇಸನ್ ಹೋಲ್ಡರ್ 3, ರಶೀದ್ ಖಾನ್ 2 ಹಾಗೂ ಭುವನೇಶ್ವರ್ ಕುಮಾರ್ 1 ವಿಕೆಟ್ ಪಡೆದರು.
ಆರ್.ಸಿ.ಬಿ ನಿಗದಿಪಡಿಸಿದ 150 ರನ್ ಗುರಿ ಬೆನ್ನಟ್ಟಿದ್ದ ಸನ್ ರೈಸರ್ಸ್ ಹೈದ್ರಾಬಾದ್ ಪರ ನಾಯಕ ಡೇವಿಡ್ ವಾರ್ನರ್ 54 (37 ಎಸೆತ, 1 ಸಿಕ್ಸರ್, 7 ಬೌಂಡರಿ), ಮನೀಶ್ ಪಾಂಡೆ 38 (39 ಎಸೆತ, ತಲಾ 2 ಬೌಂಡರಿ ಹಾಗೂ ಸಿಕ್ಸರ್), ರಶೀದ್ ಖಾನ್ 17 ರನ್ (9 ಎಸೆತ, 1 ಬೌಂಡರಿ, 1 ಸಿಕ್ಸರ್) ಗಳಿಸಿ ಹೋರಾಟ ನಡೆಸಿದಾದರೂ ಅಂತಿಮವಾಗಿ ನಿಗದಿತ 20 ಓವರ್‍ಗಳಲ್ಲಿ 9 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಲಷ್ಟೇ ಶಕ್ತವಾಗಿ 6 ರನ್‍ಗಳಿಂದ ಶರಣಾಯಿತು.
ಸಂಪೂರ್ಣವಾಗಿ ಹೈದರಾಬಾದ್ ಪರವಾಗಿದ್ದ ಪಂದ್ಯದಲ್ಲಿ ಆರ್.ಸಿ.ಬಿ ಬೌಲರ್ ಶಹಬಾಝ್ ಅಹ್ಮದ್ 2 ಓವರ್ ಬೌಲ್ ಮಾಡಿ ಕೇವಲ 7 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದರು. ಅದೂ ಕೂಡಾ ಒಂದೇ ಓವರಿನಲ್ಲಿ 3 ವಿಕೆಟ್ ಪಡೆದ ಶಹಬಾಝ್ ಪಂದ್ಯದ ಗತಿಯನ್ನೇ ಬದಲಿಸಿದರು. 17ನೇ ಓವರ್ ಎಸೆದ ಶಹಬಾಜ್ ಜಾನಿ ಬೈಸ್ರ್ಟೊ, ಮನೀಷ್ ಪಾಂಡೆ ಹಾಗೂ ಅಬ್ದುಲ್ ಸಮದ್ ಅವರನ್ನು ಔಟ್ ಮಾಡಿದ ಪರಿಣಾಮ ಪಂದ್ಯ ಬೆಂಗಳೂರಿನತ್ತ ತಿರುಗಿತು. ಈ ಮೂಲಕ ಹೈದರಾಬಾದ್ ಪರವಾಗಿದ್ದ ಪಂದ್ಯ ಆರ್.ಸಿ.ಬಿ. ಪರವಾಗುವಂತೆ ಮಾಡಿದರು. 18ನೇ ಓವರಿನಲ್ಲಿ ಹರ್ಷಲ್ ಪಟೇಲ್ 7 ರನ್ ನೀಡಿದರೆ, 19ನೇ ಓವರಿನಲ್ಲಿ ಸಿರಾಜ್ 11 ರನ್ ನೀಡಿದರು. ಕೊನೆಯ ಓವರಿನಲ್ಲಿ 16 ರನ್ ಅವಶ್ಯಕತೆ ಇತ್ತು. ಎಸೆತಗಾರಿಕೆ ನಡೆಸಿದ ಹರ್ಷಲ್ ಪಟೇಲ್ 9 ರನ್ ನೀಡಿ 2 ವಿಕೆಟ್ ಪಡೆದು ತಂಡಕ್ಕೆ ಜಯ ತಂದುಕೊಟ್ಟರು. ಮೊಹಮ್ಮದ್ ಸಿರಾಜ್ 2 ಹಾಗೂ ಹರ್ಷಲ್ ಪಟೇಲ್ 2 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
0 comments:
Post a Comment