ಬೆಂಗಳೂರು, ಎಪ್ರಿಲ್ 24, 2021 (ಕರಾವಳಿ ಟೈಮ್ಸ್) : ಈ ತಿಂಗಳ 28 ರಿಂದ ಮೇ 18ರವೆಗೆ ನಡೆಯಲಿರುವ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗೆ ಪದವಿಪೂರ್ವ ಶಿಕ್ಷಣ ಇಲಾಖೆ ಕೋವಿಡ್ ನಿಯಮಾವಳಿಗೆ ಹೊಂದಿಕೊಂಡು ಮಾರ್ಗಸೂಚಿ ಪ್ರಕಟಿಸಿದೆ.
ಈಗಾಗಲೇ ಎಪ್ರಿಲ್ 28 ರಿಂದ ಮೇ 18 ರವರೆಗೆ 2021ನೇ ಸಾಲಿನ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ನಡೆಸಲು ಎಲ್ಲಾ ಉಪ ನಿರ್ದೇಶಕರುಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖಾ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ. ಪ್ರಾಯೋಗಿಕ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಕಾಲೇಜುಗಳಲ್ಲಿಯೇ ನಡೆಸುವ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ತಲುಪಿಸಲು ಕ್ರಮ ಕೈಗೊಳ್ಳುವುದು, ಯಾವುದೇ ವಿದ್ಯಾರ್ಥಿ ಪರೀಕ್ಷೆಯಿಂದ ವಂಚಿತರಾದರೆ ಇದಕ್ಕೆ ಪ್ರಾಂಶುಪಾಲರೇ ನೇರ ಹೊಣೆಯಾಗಲಿದ್ದಾರೆ ಎಂದು ಮಾರ್ಗಸೂಚಿಯಲ್ಲಿ ಎಚ್ಚರಿಸಲಾಗಿದೆ.
ಮಾರ್ಗಸೂಚಿ ಪ್ರಕಾರ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕೊರೋನ ವರದಿ ಕಡ್ಡಾಯವಲ್ಲ. ಆದರೆ ಧರ್ಮಲ್ ಸ್ಕ್ಯಾನಿಂಗ್ ಕಡ್ಡಾಯವಾಗಿದೆ. ವಾರಾಂತ್ಯ ಕಫ್ರ್ಯೂ ಇರುವುದರಿಂದ ಶನಿವಾರ ಹಾಗೂ ಭಾನುವಾರ ಪರೀಕ್ಷೆ ನಡೆಸುವಂತಿಲ್ಲ. ಆರೋಗ್ಯ ಇಲಾಖೆ ನೀಡಿರುವ ಕೊರೋನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ.
ಮೇ 4ವರೆಗೆ ಪಿಯುಸಿ ಭೌತಿಕ ತರಗತಿಗಳು ಸ್ಥಗಿತಗೊಳ್ಳಲಿದೆ. ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿಗಳಿಗೆ ಆನ್‍ಲೈನ್ ತರಗತಿಗಳು ಮಾತ್ರ ಸಾಗಲಿದೆ. ದ್ವಿತೀಯ ಪಿಯುಸಿ ಪೂರ್ವಸಿದ್ದತಾ ಪರೀಕ್ಷೆಗಳೂ ರದ್ದುಗೊಂಡಿದ್ದು, ಪರೀಕ್ಷಾ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಪ್ರಶ್ನೆ ಪತ್ರಿಕೆಗಳಾಗಿ ವಿದ್ಯಾರ್ಥಿಗಳಿಗೆ ನೀಡುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಕಾಲೇಜು ಪ್ರಾಂಶುಪಾಲರಿಗೆ ನಿರ್ದೇಶನ ನೀಡಿದೆ.
0 comments:
Post a Comment