ಬೆಂಗಳೂರು, ಎಪ್ರಿಲ್ 20, 2021 (ಕರಾವಳಿ ಟೈಮ್ಸ್) : ಕೊರೋನಾ ಎರಡನೇ ಅಲೆ ಜೋರಾಗಿರುವ ಹಿನ್ನಲೆಯಲ್ಲಿ ಬುಧವಾರದಿಂದ ರಾಜ್ಯಾದ್ಯಂತ ವಾರಾಂತ್ಯ ಕಫ್ರ್ಯೂ ಹಾಗೂ ರಾತ್ರಿ ಕಫ್ರ್ಯೂ ವಿಧಿಸಿ ರಾಜ್ಯ ಸರಕಾರ ನೂತನ ಮಾರ್ಗಸೂಚಿ ಹೊರಡಿಸಿದೆ.
ಮಂಗಳವಾರ ರಾಜ್ಯಪಾಲರ ನೇತೃತ್ವದಲ್ಲಿ ನಡೆದ ಸರ್ವ ಪಕ್ಷ ಸಭೆಯ ಬಳಿಕ ಈ ಹೊಸ ಮಾರ್ಗಸೂಚಿ ಹೊರಡಿಸಲಾಗಿದ್ದು, ಈ ಆದೇಶ ಮೇ 4 ರವರೆಗೆ ಜಾರಿಯಲ್ಲಿರಲಿದೆ. ಆ ಬಳಿಕ ಪರಿಸ್ಥಿತಿ ನೋಡಿಕೊಂಡು ಮುಂದಿನ ಆದೇಶದ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ತಿಳಿಸಿದ್ದಾರೆ.
ವೀಕೆಂಡ್ ಕಫ್ರ್ಯೂ ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಗ್ಗೆ 6 ಗಂಟೆವರೆಗೆ ಇರಲಿದೆ. ವೀಕೆಂಡ್ ಲಾಕ್ ದಿನ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಮಾತ್ರ ಹಣ್ಣು, ತರಕಾರಿ, ದಿನಸಿ ಖರೀದಿ ಅವಕಾಶ ನೀಡಲಾಗಿದೆ.
ಮೇ 4ರವರೆಗೆ ಶಾಲಾ-ಕಾಲೇಜುಗಳು, ಸಿನಿಮಾ ಥಿಯೇಟರ್‍ಗಳು, ಕ್ರೀಡಾಂಗಣ, ಪಾರ್ಕ್, ದೇವಸ್ಥಾನ, ಮಸೀದಿ, ಚರ್ಚ್ ಹಾಗೂ ಶಾಪಿಂಗ್ ಮಾಲ್‍ಗಳು ಬಂದ್ ಆಗಲಿದ್ದು, ಸೆಲೂನ್, ಬ್ಯೂಟಿ ಪಾರ್ಲರ್‍ಗಳಿಗೆ ಅವಕಾಶ ನೀಡಲಾಗಿದೆ. ವೈನ್ ಸ್ಟೋರ್ ಹಾಗೂ ಹೋಟೆಲ್‍ಗಳಲ್ಲಿ ಪಾರ್ಸೆಲ್‍ಗೆ ಅವಕಾಶ ನೀಡಲಾಗಿದೆ. ಮದುವೆ ಸಮಾರಂಭಕ್ಕೆ 50 ಹಾಗೂ ಅಂತ್ಯ ಸಂಸ್ಕಾರಕ್ಕೆ 20 ಜನ ಮಾತ್ರ ಸೇರಲು ಅವಕಾಶ ಕಲ್ಪಿಸಲಾಗಿದೆ. ಕಫ್ರ್ಯೂ ಸಂದರ್ಭ ಸಂಚರಿಸಲು ಯಾರಿಗೂ ಪಾಸ್ ವ್ಯವಸ್ಥೆ ಇರುವುದಿಲ್ಲ. ಲಸಿಕೆ ಹಾಕಲು ತೆರಳುವವರಿಗೆ ಹಾಗೂ ಅಗತ್ಯ ವಸ್ತು ಖರೀದಿಗೆ ಅವಕಾಶ ಕಲ್ಪಿಸಲಾಗುತ್ತಿದ್ದು, ಇದನ್ನು ಅಧಿಕಾರಿಗಳ ಜೊತೆ ದೃಢೀಕರಿಸಬೇಕಾಗಿದೆ. ಬ್ಯಾಂಕ್, ಎಟಿಎಂ ಕಾರ್ಯನಿರ್ವಹಿಸಲಿದೆ ಎಂದು ಹೊಸ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
0 comments:
Post a Comment