ಮುಂಬೈ, ಎಪ್ರಿಲ್ 13, 2021 (ಕರಾವಳಿ ಟೈಮ್ಸ್) : ಮಹಾರಾಷ್ಟ್ರದಲ್ಲಿ ಕೊರೋನಾ 2ನೇ ಅಲೆ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಬುಧವಾರದಿಂದ (ಎ 14) ಮುಂದಿನ 15 ದಿನಗಳ ಕಾಲ ಸೆಕ್ಷನ್ 144 ಜಾರಿಗೊಳಿಸಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಂಗಳವಾರ ಆದೇಶ ಹೊರಡಿಸಿದ್ದಾರೆ. ಬುಧವಾರ ರಾತ್ರಿ 8 ಗಂಟೆಯಿಂದ ನಿಷೇಧಾಜ್ಞೆ ಜಾರಿಗೆ ಬರಲಿವೆ ಎಂದು ರಾಜ್ಯದ ಜನರನ್ನುದ್ದೇಶಿಸಿ ಭಾಷಣ ಮಾಡಿದ ಠಾಕ್ರೆ ತಿಳಿಸಿದ್ದಾರೆ.
ಅವಶ್ಯಕ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸಾರ್ವಜನಿಕ ಸ್ಥಳಗಳು, ಎಲ್ಲಾ ಸಂಸ್ಥೆಗಳು ಮುಂದಿನ 15 ದಿನಗಳ ಕಾಲ ಮುಚ್ಚಲಿವೆ. ರಸ್ತೆ ಬದಿ ವ್ಯಾಪಾರಿಗಳು ಮತ್ತು ಆಹಾರ ಮಾರಾಟಗಾರರಿಗೆ ಬೆಳಗ್ಗೆ 7 ರಿಂದ ರಾತ್ರಿ 8 ಗಂಟೆಯವರೆಗೂ ಅವಕಾಶ ನೀಡಲಾಗುವುದು, ಅಲ್ಲಿಂದ ಆಹಾರವನ್ನು ಪಾರ್ಸೆಲ್ ತೆಗೆದುಕೊಂಡು ಹೋಗಬೇಕು, ಅಲ್ಲಿಯೇ ಕುಳಿತು ಊಟ ಮಾಡಲು ಅವಕಾಶ ನೀಡುವುದಿಲ್ಲ ಎಂದವರು ತಿಳಿಸಿದರು.
ಕೋವಿಡ್‍ಗೆ ನೆರವಾಗಲು ಬಯಸುತ್ತಾರಾ ಅಥವಾ ಸೋಂಕು ನಿಯಂತ್ರಿಸಲು ಕೆಲಸ ನಿರ್ವಹಿಸುತ್ತಿರುವ ಸರಕಾರದೊಂದಿಗೆ ಕೈ ಜೋಡಿಸುತ್ತಾರಾ ಎಂಬುದನ್ನು ಜನರು ನಿರ್ಧರಿಸಬೇಕಾಗಿದೆ ಎಂದು ಹೇಳಿದ ಸಿಎಂ ಉದ್ದವ್ ಠಾಕ್ರೆ ಸ್ಥಳೀಯ ರೈಲು ಸೇವೆ ಸೇರಿದಂತೆ ಸಾರ್ವಜನಿಕ ಸಾರಿಗೆ ಸೇವೆಯನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅವಶ್ಯಕ ಕೆಲಸಗಾರರಿಗೆ ಮಾತ್ರ ಸ್ಥಳೀಯ ರೈಲು ಸೇವೆ ಸೇರಿದಂತೆ ಸಾರ್ವಜನಿಕ ಸಾರಿಗೆ ಸೇವೆಯನ್ನು ಕಲ್ಪಿಸಲಾಗುವುದು, ಎಲ್ಲಾ ಅವಶ್ಯಕ ಕೈಗಾರಿಕೆಗಳು ಸಂಪೂರ್ಣ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲಿವೆ. ಕೊರೋನಾ ವೈರಸ್ ನಿರ್ಬಂಧವಿರುವ ಪ್ರದೇಶಗಳಲ್ಲಿನ ಎಲ್ಲಾ ಬಡವರು ಹಾಗೂ ಅಗತ್ಯವಿರುವವರಿಗೆ ಮುಂದಿನ ತಿಂಗಳಿನಿಂದ ಮೂರು ಕೆಜಿ ಗೋಧಿ ಮತ್ತು ಎರಡು ಕೆಜಿ ಅಕ್ಕಿಯನ್ನು ಸರಕಾರ ವಿತರಿಸಲಿದೆ ಎಂದು ಉದ್ದವ್ ಠಾಕ್ರೆ ತಿಳಿಸಿದರು.
ಮಹಾರಾಷ್ಟ್ರದಲ್ಲಿ ಮಂಗಳವಾರ 60,212 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 35,19,208ಕ್ಕೆ ಏರಿಕೆಯಾಗಿದೆ. 281 ಮಂದಿ ಸಾವಿನೊಂದಿಗೆ ಒಟ್ಟಾರೆ ಮೃತರ ಸಂಖ್ಯೆ 58,526ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಮುಂಬೈಯಲ್ಲಿ 7,873 ಹೊಸ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಒಟ್ಟು ಸಂಖ್ಯೆ 5,35,264ಕ್ಕೆ ಏರಿಕೆಯಾಗಿದೆ. 27 ಮಂದಿ ಮೃತಪಟ್ಟಿದ್ದು, ಒಟ್ಟಾರೆ ಮೃತರ ಸಂಖ್ಯೆ 12,093ಕ್ಕೆ ಏರಿಕೆಯಾಗಿದೆ.
0 comments:
Post a Comment