ಝಾಕಿರ್ |
ಮುಹಮ್ಮದ್ ಸಿನಾನ್ |
ಕಳಚಿಟ್ಟ ವಸ್ತ್ರ |
ಹೃದಯ ಶಸ್ತ್ರ ಚಿಕಿತ್ಸೆಗೊಳಗಾಗಿ ವಿಶ್ರಾಂತಿ ಪಡೆಯುತ್ತಿರುವ ಝಾಕಿರ್ ಅವರ ತಂದೆ |
ನೆಲ್ಯಾಡಿ, ಎಪ್ರಿಲ್ 19, 2021 (ಕರಾವಳಿ ಟೈಮ್ಸ್) : ಇಲ್ಲಿಗೆ ಸಮೀಪದ ಇಚಿಲಂಪಾಡಿ ಎಂಬಲ್ಲಿನ ಗುಂಡ್ಯ ಹೊಳೆಯಲ್ಲಿ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮವಾರ ಸಂಜೆ ವೇಳೆ ನಡೆದಿದೆ.
ಮೃತ ಯುವಕರನ್ನು ನೆಲ್ಯಾಡಿ-ಶಾಂತಿಬೆಟ್ಟು ನಿವಾಸಿ ಉಮ್ಮರ್ ಫಾರೂಕ್ ಅವರ ಪುತ್ರ ಝಾಕಿರ್ (19) ಹಾಗೂ ಉಮ್ಮರ್ ಫಾರೂಕ್ ಅವರ ಸಹೋದರಿ ಪುತ್ರ, ಉಪ್ಪಿನಂಗಡಿ ಸಮೀಪದ ಸರಳೀಕಟ್ಟೆ ನಿವಾಸಿ ಇಬ್ರಾಹಿಂ ಮುಸ್ಲಿಯಾರ್ ಅವರ ಮಗ ಮುಹಮ್ಮದ್ ಸಿನಾನ್ (20) ಎಂದು ಹೆಸರಿಸಲಾಗಿದೆ.
ನೆಲ್ಯಾಡಿಯಲ್ಲಿ ತನ್ನ ಮಾವನ ಕೋಳಿ ಅಂಗಡಿಯಲ್ಲಿ ಕೆಲಸಕ್ಕಿದ್ದ ಸಿನಾನ್ ಹಾಗೂ ಕಾಲೇಜು ವ್ಯಾಸಂಗ ಮಾಡುತ್ತಿದ್ದ ಝಾಕಿರ್ ಜೊತೆಗೂಡಿ ಸೋಮವಾರ ಸಂಜೆ ಸ್ನಾನಕ್ಕೆಂದು ಇಚಿಲಂಪಾಡಿಯ ಗುಂಡ್ಯ ಹೊಳೆಗೆ ತೆರಳಿದ್ದರು. ಸ್ನಾನದ ವೇಳೆ ಇಬ್ಬರೂ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸಂಜೆ ವೇಳೆಗೆ ನದಿ ತಟದಲ್ಲಿ ಮೊಬೈಲ್ ರಿಂಗಿಣಿಸುವುದು ಕೇಳಿದ ಹಿನ್ನಲೆಯಲ್ಲಿ ಸ್ಥಳೀಯರು ತೆರಳಿ ಪರಿಶೀಲಿಸಿದಾಗ ನದಿ ತಟದಲ್ಲಿ ಬೈಕ್ ಹಾಗೂ ಕಳಚಿಟ್ಟ ವಸ್ತ್ರ ಕಂಡು ಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯರು ನದಿಯಲ್ಲಿ ಹುಡುಕಾಟ ನಡೆಸಿದಾಗ ಇಬ್ಬರ ಮೃತದೇಹ ಕೂಡಾ ಅಲ್ಲೇ ಸಮೀಪದಲ್ಲಿ ದೊರೆತಿದೆ.
ಮೃತ ಝಾಕಿರ್ ತಂದೆ ಉಮ್ಮರ್ ಫಾರೂಕ್ ಇತ್ತೀಚೆಗಷ್ಟೆ ಹೃದಯ ಸಂಬಂಧಿ ಕಾಯಿಲೆಗಾಗಿ ಶಸ್ತ್ರ ಚಿಕಿತ್ಸೆ ನಡೆಸಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದು, ಮೊದಲೇ ಬಡತನದಲ್ಲಿರುವ ಕುಟುಂಬಕ್ಕೆ ಇದೀಗ ಹಿರಿಯ ಪುತ್ರನ ಅನಿರೀಕ್ಷಿತ ಸಾವಿನ ಸುದ್ದಿ ಬರಸಿಡಿಲು ಬಡಿದಂತಾಗಿದೆ.
ಸ್ಥಳಕ್ಕೆ ಕಡಬ ಠಾಣಾ ಪೆÇಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಕಡಬ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಗಿದೆ.
0 comments:
Post a Comment