ಮುಂಬೈ, ಎಪ್ರಿಲ್ 29, 2021 (ಕರಾವಳಿ ಟೈಮ್ಸ್) : ಮಹಾರಾಷ್ಟ್ರದಲ್ಲಿ ಕೊರೋನಾ ಇನ್ನೂ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಈಗಾಗಲೇ ವಿಧಿಸಲಾಗಿರುವ ಲಾಕ್ ಡೌನ್ ನಿರ್ಬಂಧವನ್ನು ಮತ್ತೆ 15 ದಿನಗಳ ಕಾಲ ವಿಸ್ತರಿಸಲಾಗಿದೆ.
ಈ ಬಗ್ಗೆ ಬುಧವಾರ ಮಾಹಿತಿ ನೀಡಿರುವ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೊಪೆ, ಮತ್ತೆ 15 ದಿನಗಳ ಕಾಲ ಲಾಕ್‍ಡೌನ್ ನಿರ್ಬಂಧಗಳನ್ನು ವಿಸ್ತರಿಸಲಾಗಿದೆ ಎಂದಿದ್ದಾರೆ. ಈ ಹಿಂದೆ ಎಪ್ರಿಲ್ 4 ರಂದು ವಿಧಿಸಲಾಗಿದ್ದ ಹಿಂದಿನ ಲಾಕ್‍ಡೌನ್ ಎಪ್ರಿಲ್ 30 ರಂದು ಕೊನೆಗೊಳ್ಳಲಿದೆ. ಇದೀಗ ಮತ್ತೆ 15 ದಿನಗಳ ಕಾಲ ನಿರ್ಬಂಧಗಳನ್ನು ಮುಂದುವರೆಸಲಾಗಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ನಂತರ ಈ ನಿರ್ಧಾರಕ್ಕೆ ಸರಕಾರ ಬಂದಿದೆ, ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಸೋಂಕುಗಳ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕ್ಯಾಬಿನೆಟ್ ಸಭೆಯಲ್ಲಿ ಲಾಕ್ಡೌನ್ ವಿಸ್ತರಣೆ ಮಾಡುವ ಕುರಿತು ಸಚಿವರು ಮನವಿ ಮಾಡಿದ್ದರು ಎನ್ನಲಾಗಿದೆ.
ಕೊರೋನಾ ವೈರಸ್ ಸೋಂಕಿನಲ್ಲಿ ಭಾರಿ ಏರಿಕೆಯ ಹಿನ್ನೆಲೆಯಲ್ಲಿ, ರಾಜ್ಯ ಸರಕಾರವು ಎಪ್ರಿಲ್ 4 ರಂದು ವಾರಾಂತ್ಯದ ಲಾಕ್‍ಡೌನ್ ಘೋಷಿಸಿತ್ತು ಮತ್ತು ವಾರದ ದಿನಗಳಲ್ಲಿ ಎಪ್ರಿಲ್ 30 ರವರೆಗೆ ಜನರ ಸಂಚಾರಕ್ಕೆ ಕಡಿವಾಣ ಹಾಕಿತ್ತು. ಖಾಸಗಿ ಕಚೇರಿಗಳು, ಚಿತ್ರ ಮಂದಿರಗಳಿಗೆ ಸರಕಾರ ನಿರ್ಬಂಧ ವಿಧಿಸಿತ್ತು. ಪ್ರಸ್ತುತ, ಶುಕ್ರವಾರ ರಾತ್ರಿ 8 ರಿಂದ ಸೋಮವಾರ ಬೆಳಿಗ್ಗೆ 7 ಗಂಟೆಯವರೆಗೂ ವಾರಾಂತ್ಯದ ಲಾಕ್ಡೌನ್ ಜಾರಿಯಲ್ಲಿರುತ್ತದೆ ಎಂದು ಟೋಪೆ ಮಾಹಿತಿ ನೀಡಿದ್ದಾರೆ.
0 comments:
Post a Comment