ಮಂಗಳೂರು, ಎ. 03, 2021 (ಕರಾವಳಿ ಟೈಮ್ಸ್) : ಭಿನ್ನ ಕೋಮಿಗೆ ಸೇರಿದ ಯುವಕ-ಯುವತಿ ಮಂಗಳೂರಿನಿಂದ ಖಾಸಗಿ ಬಸ್ಸಿನಲ್ಲಿ ಬೆಂಗಳೂರಿಗೆ ಉದ್ಯೋಗ ಹುಡುಕಾಟಕ್ಕೆ ತೆರಳುತ್ತಿದ್ದ ಸಂದರ್ಭ ಬಸ್ಸು ಅಡ್ಡಗಟ್ಟಿ ಯುವಕ-ಯುವತಿಯನ್ನು ಬಸ್ಸಿನಿಂದ ಇಳಿಸಿ ಯುವಕನಿಗೆ ಥಳಿಸಿದ್ದಲ್ಲದೆ ಚೂರಿಯಿಂದ ಇರಿದ ಘಟನೆ ಗುರುವಾರ ರಾತ್ರಿ ನಗರದ ಪಂಪ್‍ವೆಲ್ ಬಳಿ ಸಂಭವಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಕಾರ್ಯಪ್ರವೃತ್ತರಾದ ಮಂಗಳೂರು ಪೊಲೀಸರು ನಾಲ್ಕು ಮಂದಿ ದುಷ್ಕರ್ಮಿಗಳನ್ನು ದಸ್ತಗಿರಿ ಮಾಡಿದ್ದಾರೆ.
ಪದವಿ ತರಗತಿಯಲ್ಲಿ ಓದುತ್ತಿರುವ ಸಂದರ್ಭ ಕ್ಲಾಸ್ ಮೇಟ್‍ಗಳಾದ ನಗರದ ಫ್ಲಾಟ್ ನಿವಾಸಿ ಯುವಕ ಅಸ್ವಿದ್ ಮುಹಮ್ಮದ್ ಅನ್ವರ್ (24) ಹಾಗೂ ಸ್ನೇಹಿತೆ ಯುವತಿ ಪದವಿ ಮುಗಿಸಿದ ಬಳಿಕ ಉದ್ಯೋಗದ ಹುಟುಕಾಟದಲ್ಲಿದ್ದು, ಗುರುವಾರ ರಾತ್ರಿ ಯುವತಿ ಸಹಾಯ ಕೇಳಿದ ಮೇರೆಗೆ ಯುವಕ ಕೂಡಾ ಯುವತಿಯ ಜೊತೆ ಖಾಸಗಿ ಬಸ್ಸಿನಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದ. ಆದರೆ ಬಸ್ಸು ಪಂಪ್ ವೆಲ್ ತಲುಪುತ್ತಲೇ ಏಳೆಂಟು ಮಂದಿ ದುಷ್ಕರ್ಮಿಗಳ ಗುಂಪು ಬಸ್ಸನ್ನೇರಿ ಜೋಡಿಯನ್ನು ಬಸ್ಸಿನಿಂದ ಕೆಳಗಿಳಿಸಿ ನೈತಿಕ ಪೊಲೀಸ್ ಗಿರಿ ಮೆರೆದಿದೆ. ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಲ್ಲದೆ ಚೂರಿಯಿಂದ ಇರಿದಿದ್ದಾರೆ. ಇದರಿಂದ ಯುವಕ ಗಂಭೀರ ಗಾಯಗೊಂಡಿದ್ದಾನೆ. ಈ ವೇಳೆ ಯುವಕನ ರಕ್ಷಣೆಗೆ ಬಂದ ಯುವತಿ ಕೂಡ ಗಾಯಗೊಂಡಿದ್ದಾಳೆ. ಘಟನೆಯಲ್ಲಿ ಭಜರಂಗದಳದ ಕಾರ್ಯಕರ್ತರು ಎನ್ನಲಾದ ದುಷ್ಕರ್ಮಿಗಳು ಪಾಲ್ಗೊಂಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ಕಾರ್ಯಾಚರಣೆಗಿಳಿದ ಪೊಲೀಸರು ನಾಲ್ಕು ಮಂದಿ ಆರೋಪಿಗಳಾದ ಅತ್ತಾವರ-ಬಾಬುಗುಡ್ಡೆ ನಿವಾಸಿ ಬಾಲಚಂದ್ರ ಯಾನೆ ಬಾಲು (28), ಶಕ್ತಿನಗರದ ಜಯಪ್ರಕಾಶ್ (27), ಉರ್ವ ಮಾರಿಗುಡಿ ಕ್ರಾಸ್ ರೋಡ್ ನಿವಾಸಿ ಅನಿಲ್ ಕುಮಾರ್ (38) ಹಾಗೂ ಬಂದರ್ ಸಮೀಪದ ಕಂದಕ ನಿವಾಸಿ ಧನುಷ್ ಭಂಡಾರಿ ಯಾನೆ ಸಂತು (25) ಎಂಬವರುಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ನಾಲ್ಕೂ ಮಂದಿ ಆರೋಪಿಗಳೂ ಕೂಡಾ ಕ್ರಿಮಿನಲ್ ಹಿನ್ನಲೆಯುಳ್ಳವರಾಗಿದ್ದು, ವಿವಿಧ ಪೊಲೀಸ್ ಠಾಣೆಗಳಲ್ಲಿ ವಿವಿಧ ಗಂಭೀರ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಕಂಕನಾಡಿ ಠಾಣೆಯಲ್ಲಿ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದ್ದು, ಘಟನೆಯಲ್ಲಿ ಪಾಲ್ಗೊಂಡ ಇತರ ಆರೋಪಿಗಳ ಜಾಡು ಪತ್ತೆ ಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.
ಈಗಾಗಲೇ ಮಂಗಳೂರಿನ ಸುರತ್ಕಲ್, ಪಂಪ್ ವೆಲ್ ಹಾಗೂ ಬೆಳ್ತಂಗಡಿಯಲ್ಲಿ ಸರಣಿಯಾಗಿ ನೈತಿಕ ಪೊಲೀಸ್ ಗಿರಿ ಪ್ರಕರಣಗಳು ವರದಿಯಾಗಿರುವ ಹಿನ್ನಲೆಯಲ್ಲಿ ದುಷ್ಕರ್ಮಿಗಳ ಹೆಡೆಮುರಿ ಕಟ್ಟಲು ಮುಂದಿನ ದಿನಗಳಲ್ಲಿ ವಿವಿಧ ಬಸ್ಸು ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಪೊಲೀಸರು ವಿಶೇಷ ಗಸ್ತು ಕಾರ್ಯ ನಡೆಸಲಿದ್ದಾರೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
0 comments:
Post a Comment