ಬೆಂಗಳೂರು, ಎಪ್ರಿಲ್ 03, 2021 (ಕರಾವಳಿ ಟೈಮ್ಸ್) : ಕೊರೋನಾ ಹೆಚ್ಚುತ್ತಿರುವ ಸದ್ಯದ ಪರಿಸ್ಥಿತಿ ಅರ್ಥ ಮಾಡಿಕೊಂಡು ಸಾರ್ವಜನಿಕರು ಕಡ್ಡಾಯವಾಗಿ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ.
ಕಳೆದೊಂದು ತಿಂಗಳಿನಿಂದ ಮಾಧ್ಯಮಗಳ ಮೂಲಕ ಕೋವಿಡ್ ನಿಯಮಗಳನ್ನ ಪಾಲಿಸುವಂತೆ ಸಾರ್ವಜನಿಕರಿಗೆ ಹೇಳುತ್ತಾ ಬಂದಿದ್ದೇನೆ. ಆದ್ರೂ ಜನ ಮಾತ್ರ ನಿಯಮ ಪಾಲನೆ ಮಾಡದ ಹಿನ್ನೆಲೆಯಲ್ಲಿ ಕಠಿಣ ನಿಯಮ ಜಾರಿಗೊಳಿಸಲಾಗುತ್ತಿದೆ. ಕೊರೊನಾ ಎರಡನೇ ಅಲೆಯ ಹೊಸ್ತಿಲಿನಲ್ಲಿ ಎಲ್ಲ ಆರ್ಥಿಕ ಚಟುವಟಿಕೆಗಳಿಗೆ ಕರ್ನಾಟಕ ಸರಕಾರ ಅವಕಾಶ ನೀಡಿತ್ತು. ಸದ್ಯ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, 45 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಲಸಿಕೆ ಪಡೆದುಕೊಳ್ಳಬೇಕೆಂದು ಸೂಚಿಸಿದರು.
ಈ ಎರಡು ತಿಂಗಳು ಯಾವುದೇ ಕ್ರಮ ತೆಗೆದುಕೊಳ್ಳದಿದ್ರೆ ಮುಂದೆ ಆಗುವ ಅನಾಹುತಗಳಿಗೆ ಸರಕಾರವೇ ಜವಾಬ್ದಾರಿ ಆಗಬೇಕಾಗುತ್ತದೆ. ಇನ್ನೆರಡು ತಿಂಗಳು ಈ ಅಲೆಯ ತೀವ್ರತೆ ರಾಜ್ಯದಲ್ಲಿರಲಿದ್ದು, ಮೇ ಅಂತ್ಯಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆ ಆಗಬಹುದು ಎಂದು ತಜ್ಞರು ತಿಳಿಸಿದ್ದಾರೆ. ಹಾಗಾಗಿ ಮಕ್ಕಳು ಸೇರಿದಂತೆ ಜನರ ರಕ್ಷಣೆ ಸರಕಾರದ ಕೆಲಸ. ಸಿಎಂ, ಮಂತ್ರಿಗಳು, ತಜ್ಞರು ಜೊತೆ ಚರ್ಚಿಸಿ ಸಲಹಾ ಸಮಿತಿಗಳ ವರದಿ ಆಧರಿಸಿ ಈ ಕಠಿಣ ನಿಯಮ ತರಲಾಗಿದೆ ಎಂದು ತಿಳಿಸಿದರು.
ಪರಿಸ್ಥಿತಿ ಕೈ ಮೀರಿ ಹೋಗಬಾರದೆಂಬ ಉದ್ದೇಶದಿಂದ ಅನಿವಾರ್ಯವಾಗಿ ನಿಯಮಗಳನ್ನು ಪಾಲನೆ ಮಾಡಬೇಕು. ನಾನು ಯಾರೋ ಒಬ್ಬರ ಪರವಾಗಿ ಮಾತನಾಡಲ್ಲ. ವಲಯವಾರು ಎಲ್ಲರ ಬಗ್ಗೆಯೂ ಗೌರವವಿದೆ. ಜಿಮ್, ಕ್ಲಬ್, ಸ್ವಿಮ್ಮಿಂಗ್ ಪೂಲ್, ಖಾಸಗಿ ಶಾಲೆಯ ಮಾಲೀಕರು ಸೇರಿದಂತೆ ಎಲ್ಲ ವರ್ಗದವರು ತಮಗೆ ರಿಯಾಯ್ತಿ ನೀಡಬೇಕೆಂದು ಮಾಧ್ಯಮಗಳ ಮುಂದೆ ಹೇಳುತ್ತಿದ್ದಾರೆ. ಈ ನಿಯಮಗಳೆಲ್ಲ ತಾತ್ಕಾಲಿಕ. ಇದರಿಂದಲೇ ಕೊರೊನಾ ಕಡಿಮೆ ಆಗುತ್ತೆ ಅಂತನೂ ಹೇಳಲ್ಲ. ಆದ್ರೆ ಮಹಾಮಾರಿಯ ನಿಯಂತ್ರಣಕ್ಕಾಗಿ ಕೆಲ ರೂಲ್ಸ್ ಪಾಲಿಸಲೇಬೇಕಾಗಿದೆ ಎಂದು ಸಾರ್ವಜನಿಕರಲ್ಲಿ ಸುಧಾಕರ್ ಮನವಿ ಮಾಡಿಕೊಂಡರು.
0 comments:
Post a Comment