ಬೆಂಗಳೂರು, ಎಪ್ರಿಲ್ 30, 2021 (ಕರಾವಳಿ ಟೈಮ್ಸ್) : ರಾಜ್ಯದ ವಿವಿಧೆಡೆ ಸ್ಥಳಿಯಾಡಳಿತಗಳಾದ ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ ಹಾಗೂ ಮಹಾನಗರ ಪಾಲಿಕೆ ಚುನಾವಣೆಗಳ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು ಬಹುತೇಕ ಕಡೆ ಕಾಂಗ್ರೆಸ್ ಅಧಿಕಾರ ಗಿಟ್ಟಿಸಿಕೊಂಡಿದೆ.
ಒಟ್ಟು 10 ಸ್ಥಳೀಯಾಡಳಿತಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಏಳು ಕಡೆ ಅಧಿಕಾರಕ್ಕೇರಿದರೆ, ಎರಡು ಕಡೆ ಜೆಡಿಎಸ್ ಅಧಿಕಾರಕ್ಕೇರಿದೆ. ಮಡಿಕೇರಿ ನಗರ ಸಭೆ ಅಧಿಕಾರ ಮಾತ್ರ ಬಿಜೆಪಿ ಪಾಲಾಗಿದ್ದು, ಇಲ್ಲಿ ಕಾಂಗ್ರೆಸ್ , ಜೆಡಿಎಸ್ ಧೂಳಿಪಟವಾಗಿದೆ.
ಬಳ್ಳಾರಿ ಮಹಾನಗರ ಪಾಲಿಕೆಯ ಒಟ್ಟು 39 ಸ್ಥಾನಗಳ ಪೈಕಿ ಕಾಂಗ್ರೆಸ್ 20, ಬಿಜೆಪಿ 14 ಹಾಗೂ 5 ಮಂದಿ ಪಕ್ಷೇತರರು ಜಯಗಳಿಸಿದ್ದಾರೆ.
ರಾಮನಗರ ನಗರಸಭೆಯೂ ಕೈ ಪಾಲಾಗಿದೆ. 31 ವಾರ್ಡ್ ಗಳ ಪೈಕಿ 19 ಸ್ಥಾನಗಳು ಕಾಂಗ್ರೆಸ್, 11 ಜೆಡಿಎಸ್ ಹಾಗೂ ಒಂದು ಸ್ಥಾನ ಪಕ್ಷೇತರ ಪಾಲಾಗಿದೆ. ಬಿಜೆಪಿ ಖಾತೆ ತೆರೆಯುವಲ್ಲಿ ವಿಫಲವಾಗಿದೆ.
ಹಾಸನದ ಬೇಲೂರು ಪುರಸಭೆಯೂ ಕಾಂಗ್ರೆಸ್ ಪಾಲಾಗಿದೆ. 25 ವಾರ್ಡ್ ಕಾಂಗ್ರೆಸ್ ಗೆದ್ದರೆ, 5 ವಾರ್ಡ್ ಜೆಡಿಎಸ್ ಪಾಲಾಗಿದೆ. ಒಂದು ಸ್ಥಾನ ಬಿಜೆಪಿ ಗೆದ್ದಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರಸಭೆಯ 35 ಸ್ಥಾನಗಳ ಪೈಕಿ 18 ಕಾಂಗ್ರೆಸ್ ಗೆದ್ದಿದ್ದು, 11 ಸ್ಥಾನ ಜೆಡಿಎಸ್ ಗೆದ್ದಿದೆ. 6 ಸ್ಥಾನ ಬಿಜೆಪಿ ಪಾಲಾಗಿದೆ.
ಬೀದರ್ ನಗರಸಭೆಯಲ್ಲೂ ಕಾಂಗ್ರಸ್ ಅತಿ ದೊಡ್ಡ ಪಕ್ಷವಾಗಿ ಮೂಡಿ ಬಂದಿದೆ. 35 ಸ್ಥಾನಗಳ ಪೈಕಿ 15 ಕಾಂಗ್ರೆಸ್, ಬಿಜೆಪಿ 8, ಜೆಡಿಎಸ್ 7 ಸ್ಥಾನಗಳನ್ನು ಪಡೆದಿದೆ. ಎಐಎಂಐಎಂ 2 ಹಾಗೂ ಆಮ್ ಆದ್ಮಿ ಒಂದು ಸ್ಥಾನ ಗೆದ್ದುಕೊಂಡಿದೆ.
ವಾರ್ಡ್ ಸಂಖ್ಯೆ 26 ಹಾಗೂ 32 ರಲ್ಲಿ ನ್ಯಾಯಾಲಯದಲ್ಲಿರುವುದರಿಂದ ಚುನಾವಣೆ ನಡೆದಿಲ್ಲ. ವಾರ್ಡ್ ಸಂಖ್ಯೆ 28 ಎಲ್ಲಿ ಅವಿರೋಧ ಆಯ್ಕೆ ನಡೆದಿದೆ.
ಮಡಿಕೇರಿ ನಗರಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೇರಿದೆ.
0 comments:
Post a Comment