ಮುಂಬೈ, ಎಪ್ರಿಲ್ 13, 2021 (ಕರಾವಳಿ ಟೈಮ್ಸ್) : ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಐಪಿಎಲ್ 14ನೇ ಆವೃತ್ತಿಯ ರಾಜಸ್ಥಾನ ರಾಯಲ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳ ನಡುವಿನ ಪಂದ್ಯ ರೋಚಕ ಅಂತ್ಯ ಕಂಡಿದ್ದು, ಕೊನೆ ಎಸೆತದಲ್ಲಿ ನಡೆದ ಕ್ಲೈಮಾಕ್ಸ್ ನಲ್ಲಿ ಪಂಜಾಬ್ ರೋಮಾಂಚಕ 4 ರನ್ ಅಂತರದ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ಇಲೆವೆನ್ ತಂಡ ನಿಗದಿತ 20 ಓವರ್‍ಗಳಲ್ಲಿ 6 ವಿಕೆಟ್ ನಷ್ಟಕ್ಕೆ 221 ರನ್‍ಗಳ ಬೃಹತ್ ಮೊತ್ತ ದಾಖಲಿಸಿತು. ಪಂಜಾಬ್ ಪರ ಕೆ.ಎಲ್. ರಾಹುಲ್ 91 (50 ಎಸೆತ, 7 ಬೌಂಡರಿ, 5 ಸಿಕ್ಸರ್), ದೀಪಕ್ ಹೂಡಾ 64, ಕ್ರಿಸ್ ಗೇಲ್ ಕ್ರಿಸ್ ಗೇಲ್ 40 ರನ್ (28 ಎಸೆತ, 4 ಬೌಂಡರಿ, 2 ಸಿಕ್ಸರ್) ಗಳಿಸಿದರು. ಮೂರನೇ ವಿಕೆಟ್‍ಗೆ ಒಂದಾದ ರಾಹುಲ್ ಮತ್ತು ದೀಪಕ್ ಹೂಡಾ ಸಿಕ್ಸರ್ ಮತ್ತು ಬೌಂಡರಿಗಳ ಮಳೆ ಸುರಿಸಲು ಆರಂಭಿಸಿದರು. ಮೈದಾನದ ಮೂಲೆ ಮೂಲೆಗೆ ಚೆಂಡನ್ನು ಚಚ್ಚಿದ ಈ ಜೋಡಿ ಕೇವಲ 47 ಎಸೆತದಲ್ಲಿ 105 ರನ್ ಪೇರಿಸಿತು. ರಾಜಸ್ಥಾನ ರಾಯಲ್ಸ್ ಪರ ಚೇತನ್ ಸಕಾರಿಯಾ 3, ಕ್ರಿಸ್ ಮೋರಿಸ್ 2, ರಿಯಾನ್ ಪರಾಗ್ 1 ವಿಕೆಟ್ ಪಡೆದರು.
ಪಂಜಾಬ್ ನಿಗದಿಪಡಿಸಿದ್ದ ಬೃಹತ್ ಮೊತ್ತವನ್ನು ಬೆನ್ನಟ್ಟಿದ್ದ ರಾಜಸ್ಥಾನ ರಾಯಲ್ಸ್ ಪರ ನಾಯಕ ಸಂಜು ಸ್ಯಾಮ್ಸನ್ 119, ರಿಯಾನ್ ಪರಾಗ್ 25, ಜೋಸ್ ಬಟ್ಲರ್ 25 ರನ್ ಗಳಿಸಿದರು. ಆದರೆ, ನಿಗದಿತ 20 ಓವರ್‍ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 217 ರನ್ ಗಳಿಸಲಷ್ಟೇ ಶಕ್ತವಾದ ರಾಜಸ್ಥಾನ 4 ರನ್‍ಗಳಿಂದ ಪಂಜಾಬಿಗೆ ಶರಣಾಯಿತು.
ಪಂದ್ಯದುದ್ದಕ್ಕೂ ಸ್ಫೋಟಕ ಆಟವಾಡಿ ಐಪಿಎಲ್ ಟೂರ್ನಿಯಲ್ಲಿ 3ನೇ ಶತಕ ಸಿಡಿಸಿದ ರಾಜಸ್ಥಾನ ತಂಡದ ನಾಯಕ ಸಂಜು ಸ್ಯಾಮ್ಸನ್ ಪಂದ್ಯದ ಕೊನೆಯ ಎಸೆತವನ್ನು ಸಿಕ್ಸರ್ ಆಗಿ ಪರಿವರ್ತಿಸುವಲ್ಲಿ ಕೊಂಚ ಎಡವಿದ ಪರಿಣಾಮ ಪಂಜಾಬ್ ರೋಚಕ ಗೆಲುವು ದಾಖಲಿಸಿತು. ಕೊನೆಯ ಎಸೆತದಲ್ಲಿ ಗೆಲುವಿಗೆ 5 ರನ್ ಅವಶ್ಯಕತೆ ಇದ್ದಾಗ ಚೆಂಡನ್ನು ಸಿಕ್ಸರ್‍ಗೆ ಅಟ್ಟುವ ಪ್ರಯತ್ನದಲ್ಲಿ ಸ್ಯಾಮ್ಸನ್ ಕ್ಯಾಚ್ ಔಟಾದರು.
ಬೆನ್ ಸ್ಟೋಕ್ಸ್ 0, ಜೋಸ್ ಬಟ್ಲರ್ 25 ರನ್, ಶಿವಂ ದುಬೆ 15 ರನ್ ಗಳಿಸಿ ಔಟಾದರೂ ಸ್ಯಾಮ್ಸನ್ ನೆಲಕಚ್ಚಿ ಆಡಿದರಾದರೂ ತಂಡವನ್ನು ದಡ ಸೇರಿಸುವಲ್ಲಿ ವಿಫಲರಾದರು. 12.4 ಓವರಿನಲ್ಲಿ ಶಿವಂ ದುಬೆ ಔಟಾದಾಗ ರಾಜಸ್ಥಾನ ತಂಡದ ಸ್ಕೋರ್ 4 ವಿಕೆಟ್ ನಷ್ಟಕ್ಕೆ 123 ಆಗಿತ್ತು. ನಂತರ ಜೊತೆಯಾದ ರಿಯಾನ್ ಪರಾಗ್ ಮತ್ತು ಸ್ಯಾಮ್ಸನ್ 23 ಎಸೆತಗಳಲ್ಲಿ 52 ರನ್ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. ಉತ್ತಮವಾಗಿ ಆಡುತ್ತಿದ್ದ ಪರಾಗ್ 25 ರನ್ (11 ಎಸೆತ, 1 ಬೌಂಡರಿ, 3 ಸಿಕ್ಸರ್) ಹೊಡೆದು ಕ್ಯಾಚ್ ಔಟಾದರು.
ನಾಯಕನಾಗಿ ಆಡಿದ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿ ಐಪಿಎಲ್‍ನಲ್ಲಿ ಸಂಜು ಸ್ಯಾಮ್ಸನ್ ದಾಖಲೆ ನಿರ್ಮಿಸಿದರು. ಈ ಮೊದಲು ಸ್ಟೀವ್ ಸ್ಮಿತ್ ರಾಜಸ್ಥಾನ ತಂಡವನ್ನು ಮುನ್ನಡೆಸಿದ್ದರು. ಸ್ಯಾಮ್ಸನ್ 54 ಎಸೆತದಲ್ಲಿ ಶತಕ ಸಿಡಿಸಿದರೆ ಅಂತಿಮವಾಗಿ 119 ರನ್ (63 ಎಸೆತ, 12 ಬೌಂಡರಿ, 7 ಸಿಕ್ಸರ್) ಸಿಡಿಸಿ ಔಟಾದರು.
ಕೊನೆಯ 24 ಎಸೆತಗಳಲ್ಲಿ ರಾಜಸ್ಥಾನ ತಂಡದ ಗೆಲುವಿಗೆ 48 ರನ್ ಅವಶ್ಯಕತೆ ಇತ್ತು. 17ನೇ ಓವರಿನಲ್ಲಿ 8 ರನ್, 18ನೇ ಓವರಿನಲ್ಲಿ 19 ರನ್, 19ನೇ ಓವರಿನಲ್ಲಿ 8 ರನ್ ಬಂತು. 20ನೇ ಓವರಿನ ಮೊದಲ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ನಂತರದ ಎರಡು ಎಸೆತದಲ್ಲಿ 1, 1 ರನ್ ಬಂತು. ಅರ್ಷದೀಪ್ ಎಸೆದ 4ನೇ ಎಸೆತವನ್ನು ಸ್ಯಾಮ್ಸನ್ ಸಿಕ್ಸರ್‍ಗೆ ಅಟ್ಟಿದರು. 5ನೇ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ಕೊನೆಯ ಎಸೆತವನ್ನು ಸಿಕ್ಸರ್ ಸಿಡಿಸುವ ಪ್ರಯತ್ನ ಮಾಡಿದರೂ ಚೆಂಡನ್ನು ಹೂಡಾ ಕ್ಯಾಚ್ ಆಗಿ ಪರಿವರ್ತಿಸುವಲ್ಲಿ ಸಫಲರಾದರು. ಈ ಮೂಲಕ ಪಂಜಾಬ್ ಪಂದ್ಯವನ್ನು ಗೆದ್ದುಕೊಂಡಿತು.
0 comments:
Post a Comment