ಬೆಂಗಳೂರಿಗೆ ಮತ್ತೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ : ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಸತತ 4 ಪಂದ್ಯ ಗೆದ್ದ ಕೊಹ್ಲಿ ಪಡೆ
ಮುಂಬೈ, ಎಪ್ರಿಲ್ 22, 2021 (ಕರಾವಳಿ ಟೈಮ್ಸ್) : ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಐಪಿಎಲ್ 14ನೇ ಆವೃತ್ತಿಯ ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ರೋಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ದೇವದತ್ ಪಡಿಕ್ಕಲ್ ಅವರ ಬಿರುಸಿನ ಶತಕ ಹಾಗೂ ನಾಯಕ ವಿರಾಟ್ ಕೊಹ್ಲಿ ಅವರ ಜವಾಬ್ದಾರಿಯುತ ಅರ್ಧ ಶತಕದ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ನೋಲಾಸ್ ಜಯ ಪಡೆದಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡ 9 ವಿಕೆಟ್ ಕಳೆದುಕೊಂಡು 177 ರನ್ ಗಳಿಸಿತು. ಸವಾಲಿನ ಮೊತ್ತವನ್ನು ಸ್ವೀಕರಿಸಿದ ಬೆಂಗಳೂರು ರೋಯಲ್ ಚಾಲೆಂಜರ್ಸ್ ತಂಡದ ಆರಂಭಿಕರಾದ ದೇವದತ್ತ ಪಡಿಕ್ಕಲ್ ಹಾಗೂ ವಿರಾಟ್ ಕೊಹ್ಲಿ ನಿರಾಯಾಸವಾಗಿ ಬ್ಯಾಟ್ ಬೀಸಿ 16.3 ಓವರ್‍ಗಳಲ್ಲಿ 181 ರನ್ ಭಾರಿಸಿ ತಂಡಕ್ಕೆ 10 ವಿಕೆಟ್‍ಗಳ ಭರ್ಜರಿ ಜಯ ತಂದುಕೊಟ್ಟರು.
ಈ ಜಯದೊಂದಿಗೆ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆರ್.ಸಿ.ಬಿ. ತಾನಾಡಿದ ನಾಲ್ಕೂ ಪಂದ್ಯಗಳನ್ನು ಗೆದ್ದುಕೊಂಡಂತಾಗಿದೆ. ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸತತ 4 ಪಂದ್ಯಗಳನ್ನು ಆರ್‍ಸಿಬಿ ಗೆದ್ದುಕೊಂಡಿದೆ. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಬೆಂಗಳೂರು ಒಟ್ಟು 8 ಅಂಕದೊಂದಿಗೆ ಮತ್ತೆ ಮೊದಲ ಸ್ಥಾನಕ್ಕೇರಿದೆ.
ದೇವದತ್ ಪಡಿಕ್ಕಲ್ 27 ಎಸೆತಗಳಲ್ಲಿ ಅರ್ಧಶತಕ ಭಾರಿಸಿದರೆ, 51 ಎಸೆತದಲ್ಲಿ ಶತಕ ಸಿಡಿಸಿದರು. ಅಂತಿಮವಾಗಿ 52 ಎಸೆತಗಳಲ್ಲಿ ಅಜೇಯ 101 ರನ್ (6 ಸಿಕ್ಸರ್, 11 ಬೌಂಡರಿ) ಭಾರಿಸಿದರೆ, ನಾಯಕ ವಿರಾಟ್ ಕೊಹ್ಲಿ 34 ಎಸೆತದಲ್ಲಿ ಅರ್ಧಶತಕ ಭಾರಿಸಿ ಮುನ್ನಡೆದರಲ್ಲದೆ ಅಂತಿಮವಾಗಿ 47 ಎಸೆತಗಳಲ್ಲಿ ಅಜೇಯ 72 ರನ್ (3 ಸಿಕ್ಸರ್ ಹಾಗೂ 6 ಬೌಂಡರಿ) ಭಾರಿಸಿ ತಂಡವನ್ನು ದಡ ಸೇರಿಸಿದರು.
ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಒಟ್ಟು 7 ಮಂದಿ ಬೌಲರ್‍ಗಳನ್ನು ಪ್ರಯೋಗಿಸಿದ್ದರೂ ಈ ಜೋಡಿಯನ್ನು ಮುರಿಯಲು ಸಾಧ್ಯವಾಗಿಲ್ಲ. ಇಂದಿನ ಪಂದ್ಯದಲ್ಲಿ 51 ರನ್ ಭಾರಿಸುವಷ್ಟರಲ್ಲಿ ವಿರಾಟ್ ಕೊಹ್ಲಿ ಐಪಿಎಲ್‍ನಲ್ಲಿ 6 ಸಾವಿರ ರನ್‍ಗಳ ಗಡಿ ದಾಟಿದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಎರಡು ದಾಖಲೆ ನಿರ್ಮಿಸಿದ್ದಾರೆ. ಐಪಿಎಲ್‍ನಲ್ಲಿ 6 ಸಾವಿರ ರನ್ ಗಳಿಸಿದ ಮೊದಲ ಆಟಗಾರ ಆಗಿ ದಾಖಲೆ ನಿರ್ಮಿಸುವುದರ ಜೊತೆಗೆ ಒಂದೇ ತಂಡದ ಪರವಾಗಿ ಆಡಿ 6 ಸಾವಿರ ರನ್ ಹೊಡೆದ ಏಕೈಕ ಆಟಗಾರ ಎಂಬ ಖ್ಯಾತಿ ಕೂಡಾ ಕೊಹ್ಲಿ ಪಾಲಾಗಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ತಂಡ 43 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭ ಸಂಜು ಸ್ಯಾಮ್ಸನ್ (21 ರನ್, 18 ಎಸೆತ, 2 ಬೌಂಡರಿ, 1 ಸಿಕ್ಸರ್) ಹಾಗೂ ಶಿವಂ ದುಬೆ (46 ರನ್, 32 ಎಸೆತ, 5 ಬೌಂಡರಿ, 2 ಸಿಕ್ಸರ್) ತಂಡಕ್ಕೆ ನೆರವಾದರು. ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ರಿಯಾನ್ ಪರಾಗ್ 25 ರನ್ (16 ಎಸೆತ, 4 ಬೌಂಡರಿ), ರಾಹುಲ್ ತೆವಾಟಿಯಾ 40 ರನ್ (23 ಎಸೆತ, 4 ಬೌಂಡರಿ, 2 ಸಿಕ್ಸರ್) ನೆರವಿನಿಂದ ನಿಗದಿತ 20 ಓವರ್‍ಗಳಲ್ಲಿ 9 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿತು.
ಆರ್.ಸಿ.ಬಿ. ಪರವಾಗಿ ಮೊಹಮ್ಮದ್ ಸಿರಾಜ್ 27 ರನ್ ನೀಡಿ 3 ವಿಕೆಟ್ ಕಿತ್ತರೆ, ಹರ್ಷಲ್ ಪಟೇಲ್ 47 ರನ್ ನೀಡಿ 3 ವಿಕೆಟ್ ಪಡೆದರು. ಜೆಮಿಸನ್, ಕೇನ್ ರಿಚರ್ಡ್ಸನ್, ವಾಷಿಂಗ್ಟನ್ ಸುಂದರ್ ತಲಾ 1 ವಿಕೆಟ್ ಪಡೆದರು.
0 comments:
Post a Comment