ಕೊನೆಯ ಎಸೆತದಲ್ಲಿ ಮುಂಬೈ ಮಣಿಸಿದ ಆರ್.ಸಿ.ಬಿ : ಹರ್ಷಲ್ ಪಟೇಲ್ 5 ವಿಕೆಟ್ ಕಿತ್ತು ದಾಖಲೆ
ಚೆನ್ನೈ, ಎಪ್ರಿಲ್ 10, 2021 (ಕರಾವಳಿ ಟೈಮ್ಸ್) : ಕೊರೋನಾ ಅಬ್ಬರದ ನಡುವೆಯೂ ಐಪಿಎಲ್ ಕ್ರಿಕೆಟ್ ಕೂಟದ 14ನೇ ಆವೃತ್ತಿಗೆ ಶುಕ್ರವಾರ ಚಾಲನೆ ನೀಡಲಾಗಿದೆ. ಇಲ್ಲಿನ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‍ಗೆ ಪಂದ್ಯದ ಕೊನೆಯ ಎಸೆತದಲ್ಲಿ ಸೋಲುಣಿಸುವ ಮೂಲಕ ಸಾಮಥ್ರ್ಯ ಸಾಬೀತುಪಡಿಸಿ ಶುಭಾರಂಭಗೈದಿದೆ.
ಸೋಲಿನ ದವಡೆಗೆ ಸಿಲುಕಿದ್ದ ಬೆಂಗಳೂರು ತಂಡಕ್ಕೆ ಎಬಿ ಡೆವಿಲಿಯರ್ಸ್ ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ ಜಯದ ಹೊಸ್ತಿಲಲ್ಲಿ ಮುನ್ನಡೆಸಿದರು. ಹರ್ಷಲ್ ಪಟೇಲ್ ಮೊದಲ ಪಂದ್ಯದಲ್ಲೇ 5 ವಿಕೆಟ್ ಗೊಂಚಲು ಪಡೆದರೆ, ಎಬಿ ಡಿವಿಲಿಯರ್ಸ್ ಸಿಡಿಸಿದ ಸ್ಫೋಟಕ 48 ರನ್ ಶುಕ್ರವಾರದ ಪಂದ್ಯದ ಪ್ರಮುಖ ಹೈಲೈಟ್ಸ್ ಆಗಿದೆ.
ಟಾಸ್ ಗೆದ್ದ ಆರ್.ಸಿ.ಬಿ ನಾಯಕ ವಿರಾಟ್ ಕೊಹ್ಲಿ ಮೊದಲು ಮುಂಬೈ ಇಂಡಿಯನ್ಸ್ ತಂಡಕ್ಕೆ ಬ್ಯಾಟಿಂಗ್ ನಡೆಸುವ ಅವಕಾಶ ನೀಡಿದರು. ಎದುರಾಳಿ ನಾಯಕ ನೀಡಿದ ಅವಕಾಶ ಪಡೆದ ಮುಂಬೈ ನಿಗದಿತ 20 ಓವರ್‍ಗಳಲ್ಲಿ 9 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ, ಆರ್.ಸಿ.ಬಿ. ತಂಡಕ್ಕೆ 160 ರನ್‍ಗಳ ಸವಾಲೊಡ್ಡಿತ್ತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಬೆಂಗಳೂರು ಪಂದ್ಯದ ಕೊನೆಯ ಓವರಿನ ಅಂತಿಮ ಎಸೆತದಲ್ಲಿ ರೋಚಕ 2 ವಿಕೆಟ್‍ಗಳ ಜಯ ಸಾಧಿಸಿ ಟೂರ್ನಿಯಲ್ಲಿ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಶುಭಾರಂಭ ಮಾಡಿತು.
ತೇಲುತ್ತಾ ಸಾಗಿದ ಪಂದ್ಯದ 14 ಓವರ್ ಅಂತ್ಯಕ್ಕೆ ಬೆಂಗಳೂರು ತಂಡಕ್ಕೆ ಜಯಗಳಿಸಲು 36 ಎಸೆತಕ್ಕೆ 57 ರನ್‍ಗಳ ಅವಶ್ಯಕತೆ ಇತ್ತು. 18ನೇ ಓವರ್‍ನಲ್ಲಿ 1 ಸಿಕ್ಸ್, 1 ಬೌಂಡರಿ ಸೇರಿದಂತೆ 15 ರನ್ ಬಂದ ಕಾರಣ ಕೊನೆಯ 12 ಎಸೆತದಲ್ಲಿ 19 ರನ್‍ಗಳ ಅವಶ್ಯಕತೆ ಬಂತು. ಬುಮ್ರಾ ಎಸೆದ 19ನೇ ಓವರ್‍ನಲ್ಲಿ ಎಬಿ ಡಿವಿಲಿಯರ್ಸ್ 2 ಬೌಂಡರಿ ಭಾರಿಸಿದ್ದರಿಂದ 12 ರನ್ ಹರಿದು ಬಂತು. ಅಂತಿಮ ಓವರಿನಲ್ಲಿ 7 ರನ್ ಗಳ ಅವಶ್ಯಕತೆ ಇದ್ದಾಗ ಜನ್‍ಸೇನ್ ಎಸೆದ ಮೊದಲ ಮೂರು ಎಸೆತಗಳಲ್ಲಿ ಕ್ರಮವಾಗಿ 1,2,1 ರನ್ ಬಂತು. 4ನೇ ಎಸೆತದಲ್ಲಿ ಎಬಿಡಿ 2 ರನ್ ಕದಿಯಲು ಹೋಗಿ ರನೌಟ್ ಆದರು. ಕೊನೆಯ 2 ಎಸೆತದಲ್ಲಿ 2 ರನ್‍ಗಳ ಅವಶ್ಯಕತೆ ಇತ್ತು. 5ನೇ ಎಸೆತದಲ್ಲಿ ಲೆಗ್‍ಬೈ ಮೂಲಕ 1 ರನ್ ಬಂದರೆ ಕೊನೆಯ ಎಸೆತದಲ್ಲಿ ಹರ್ಷಲ್ ಪಟೇಲ್ ಶಾರ್ಟ್ ಫೈನ್ ಕಡೆಗೆ ಭಾರಿಸಿ 1 ರನ್ ಗಳಿಸಿದರು. ಈ ಮೂಲಕ ಕೊನೆಯ ಎಸೆತದಲ್ಲಿ ಆರ್.ಸಿ.ಬಿ. ಜಯಘೋಷ ಆಚರಿಸಿತು.
ಎಬಿ ಡಿವಿಲಿಯರ್ಸ್ (48 ರನ್, 27 ಎಸೆತ, 4 ಬೌಂಡರಿ, 2 ಸಿಕ್ಸರ್), ಗ್ಲೆನ್ ಮ್ಯಾಕ್ಸ್‍ವೆಲ್ 39 ರನ್ (28 ಎಸೆತ, 3 ಬೌಂಡರಿ, 2 ಸಿಕ್ಸರ್) ನಾಯಕ ವಿರಾಟ್ ಕೊಹ್ಲಿ (33 ರನ್, 29 ಎಸೆತ, 4 ಬೌಂಡರಿ) ಭಾರಿಸಿದರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡದ ಪರವಾಗಿ ಕಣಕ್ಕಿಳಿದ ರೋಹಿತ್ ಶರ್ಮಾ (19 ರನ್, 15 ಎಸೆತ, 1 ಸಿಕ್ಸರ್, 1 ಬೌಂಡರಿ) ಹಾಗೂ ಕ್ರಿಸ್ ಲೀನ್ 49 (35 ಎಸೆತ, 3 ಸಿಕ್ಸರ್, 4 ಬೌಂಡರಿ) ಉತ್ತಮ ಆರಂಭ ಒದಗಿಸಿದರು. ಸೂರ್ಯಕುಮಾರ್ ಯಾದವ್ 1 ಸಿಕ್ಸರ್ ಹಾಗೂ 4 ಬೌಂಡರಿಗಳನ್ನೊಳಗೊಂಡ 31 ರನ್ ಭಾರಿಸಿದರು. ಬಳಿಕದ ಬ್ಯಾಟ್ಸ್‍ಮ್ಯಾನ್‍ಗಳು ಮಿಂಚಲು ವಿಫಲರಾದರು. ಇಶಾನ್ ಕಿಶನ್ (28 ರನ್, 19 ಎಸೆತ, 2 ಬೌಂಡರಿ, 1 ಸಿಕ್ಸರ್) ಸಿಡಿಸಿ ಆಡುತ್ತಿದ್ದಾಗ ಹರ್ಷಲ್ ಪಟೇಲ್ ಬೌಲಿಂಗ್‍ನಲ್ಲಿ ಎಲ್‍ಬಿ ಬಲೆಗೆ ಬಿದ್ದರು. ಬಳಿಕ ಬಂದ ಹಾರ್ದಿಕ್ ಪಾಂಡ್ಯ 13 ರನ್, ಕೀರನ್ ಪೆÇೀಲಾರ್ಡ್ 7 ರನ್, ಕೃನಾಲ್ ಪಾಂಡ್ಯ 7 ರನ್ ಗಳಿಸಿದರೆ, ಮಾರ್ಕೊ ಜಾನ್ಸೆನ್ ಹಾಗೂ ರಾಹುಲ್ ಚಹಾರ್ ಶೂನ್ಯ ಸಂಪಾದಿಸಿದರು.
ಆರ್.ಸಿ.ಬಿ. ಪರ ಹರ್ಷಲ್ ಪಟೇಲ್ ಉತ್ತಮ ದಾಳಿ ಸಂಘಟಿಸಿ 4 ಓವರ್‍ಗಳಲ್ಲಿ 27 ರನ್‍ಗಳಿಗೆ 5 ವಿಕೆಟ್ ಗಳಿಸಿ ಮಿಂಚಿದರು. ಕೈಲ್ ಜಾಮೀಸನ್ ಮತ್ತು ವಾಷಿಂಗ್ಟ್‍ನ್ ಸುಂದರ್ ತಲಾ ಒಂದು ವಿಕೆಟ್ ಕಿತ್ತರು.
0 comments:
Post a Comment