ಚೆನ್ನೈ, ಎಪ್ರಿಲ್ 18, 2021 (ಕರಾವಳಿ ಟೈಮ್ಸ್) : ಐಪಿಎಲ್ 14ನೇ ಆವೃತ್ತಿಯ ಶನಿವಾರ ರಾತ್ರಿ ಇಲ್ಲಿನ ಎಂಎಂ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಮತ್ತೊಂದು ಲೋ ಸ್ಕೋರ್ ಹೋರಾಟದಲ್ಲಿ ಮುಂಬೈ ಇಂಡಿಯನ್ಸ್ ತಂಡ ಸನ್ ರೈಸರ್ಸ್ ಹೈದ್ರಾಬಾದ್ ತಂಡವನ್ನು ರೋಮಾಂಚಕ 13 ರನ್‍ಗಳಿಂದ ಬಗ್ಗುಬಡಿದಿದೆ.
ಗೆಲ್ಲಲು 151 ರನ್‍ಗಳ ಗುರಿ ಪಡೆದಿದ್ದ ಹೈದರಾಬಾದ್ ಅಂತಿಮವಾಗಿ ಸುಲಭ ಗೆಲುವಿನತ್ತ ಮುನ್ನುಗ್ಗುತ್ತಿತ್ತು. ಆದರೆ ಕೊನೆಯ 6 ಓವರ್‍ಗಳಲ್ಲಿ ನಡೆದ ನಾಟಕೀಯ ಬೆಳವಣಿಗೆ ಹಾಗೂ ಹಠಾತ್ ಕುಸಿತದಿಂದಾಗಿ ಹೈದ್ರಾಬಾದ್ ತಂಡ ಅಂತಿಮವಾಗಿ ನಿಗದಿತ 20 ಓವರ್‍ಗಳಲ್ಲಿ 137 ರನ್‍ಗಳಿಗೆ ಆಲೌಟ್ ಆಗಿ ವಿರೋಚಿತ ಸೋಲೊಪ್ಪಿಕೊಂಡಿತು. ಈ ಮೂಲಕ ಹೈದರಾಬಾದ್ ತಂಡ ಲೀಗ್ ಹಂತದ ಸತತ ಮೂರನೇ ಸೋಲಿನ ಕಹಿ ಅನುಭವಿಸಿತು.
ಕೊನೆಯ 36 ಎಸೆತಗಳಲ್ಲಿ ಹೈದ್ರಾಬಾದ್ ಗೆಲುವಿಗೆ 49 ರನ್‍ಗಳ ಅವಶಕತೆ ಇತ್ತು. ಈ ಹಂತದಲ್ಲಿ ಹೈದರಾಬಾದ್ 3 ವಿಕೆಟ್ ನಷ್ಟಕ್ಕೆ 102 ರನ್ ಗಳಿಸಿ ಸುಭದ್ರವಾಗಿತ್ತು. ರಾಹುಲ್ ಚಹರ್ ಎಸೆದ 15ನೇ ಓವರ್‍ನಲ್ಲಿ ವಿರಾಟ್ ಸಿಂಗ್ ಮತ್ತು ಅಭಿಷೇಕ್ ಶಮಾ ಔಟಾದರು. ಇಲ್ಲಿಂದ ಇಡೀ ಪಂದ್ಯದ ಚಿತ್ರಣವೇ ಬದಲಾಯಿತು. ಕೊನೆಯಲ್ಲಿ ವಿಜಯ್ ಶಂಕರ್ 2 ಸಿಕ್ಸರ್ ಸಿಡಿಸಿ ಗೆಲುವಿನ ಆಸೆ ಮೂಡಿಸಿದರಾದರೂ ಕೊನೆಗೂ ಬುಮ್ರಾ ಓವರ್‍ನಲ್ಲಿ 28 ರನ್ ಗಳಿಸಿ ಅವರು ಔಟಾದರು. ವಿಜಯ್ ಶಂಕರ್ ಔಟಾದ ಬೆನ್ನಲ್ಲೇ ಭುವನೇಶ್ವರ್ ಕುಮಾರ್, ಕಲೀಲ್ ಅಹ್ಮದ್ ಕೂಡಾ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ನಿರ್ಗಮಿಸಿದರು. 35 ರನ್‍ಗಳಿಗೆ ಕೊನೆಯ 7 ವಿಕೆಟ್‍ಗಳನ್ನು ಕಳೆದುಕೊಂಡು ಹೈದರಾಬಾದ್ ಅಘಾತಕಾರಿ ಸೋಲು ಅನುಭವಿಸಿತು.
ಮೊದಲ 7 ಓವರ್‍ಗಳಲ್ಲಿ 62 ರನ್‍ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಹೈದರಾಬಾದ್ ತಂಡ ಮೊದಲು ಜಾನಿ ಬೈರ್ಸ್ಟೋವ್ 43 ರನ್ (22 ಎಸೆತ, 3 ಬೌಂಡರಿ, 4 ಸಿಕ್ಸರ್) ವಿಕೆಟ್ ಕಳೆದುಕೊಂಡಿತು. ನಾಯಕ ಡೇವಿಡ್ ವಾರ್ನರ್ 36 ರನ್ (34 ಎಸೆತ, 2 ಬೌಂಡರಿ, 2 ಸಿಕ್ಸರ್) ಸಿಡಿಸಿದರೆ, ವಿಜಯ್ ಶಂಕರ್ 28 ರನ್ (25 ಎಸೆತ, 2 ಬೌಂಡರಿ) ಭಾರಿಸಿದರು.
ರಾಹುಲ್ ಚಹರ್ ಮತ್ತು ಟ್ರೆಂಟ್ ಬೌಲ್ಟ್ ತಲಾ 3 ವಿಕೆಟ್ ಪಡೆದರೆ, ಬುಮ್ರಾ 4 ಓವರ್ ಎಸೆದು 14 ರನ್ ನೀಡಿ 1 ವಿಕೆಟ್ ಪಡೆದು ನಿಯಂತ್ರಿತ ದಾಳಿ ಸಂಘಟಿಸಿದರು.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮುಂಬೈ ಇಂಡಿಯನ್ಸ್ ತಂಡ ಮೊದಲ ವಿಕೆಟ್‍ಗೆ ರೋಹಿತ್ ಶರ್ಮ ಮತ್ತು ಕ್ವಿಂಟನ್ ಡಿ ಕಾಕ್ 51 ರನ್‍ಗಳ ಜೊತೆಯಾಟ ನಡೆಸಿದರು. ರೋಹಿತ್ ಶರ್ಮ 32 ರನ್ (25 ಎಸೆತ,5 ಬೌಂಡರಿ) ಸಿಡಿಸಿ ವಿಕೆಟ್ ಒಪ್ಪಿಸಿದರೆ, ಸೂರ್ಯಕುಮಾರ್ ಯಾದವ್ 10 ರನ್ (6 ಎಸೆತ, 1 ಬೌಂಡರಿ, 1 ಸಿಕ್ಸರ್) ಮತ್ತು ಇಶಾನ್ ಕಿಶಾನ್ 12 ರನ್ (21 ಎಸೆತ) ಬಾರಿಸಿದರು. ಕ್ವಿಂಟನ್ ಡಿ ಕಾಕ್À 40 ರನ್ (39 ಎಸೆತ, 5 ಬೌಂಡರಿ) ಬಾರಿಸಿದರು. ಕೊನೆಯಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ ಕೀರನ್ ಪೆÇಲಾರ್ಡ್ 35 ರನ್ (22 ಎಸೆತ, 1 ಬೌಂಡರಿ ಮತ್ತು 3 ಸಿಕ್ಸರ್) ಸಿಡಿಸಿ ಮುಂಬೈ ಮೊತ್ತವನ್ನು 150ಕ್ಕೇರಿಸಿದರು.
ಹೈದರಾಬಾದ್ ಪರ ವಿಜಯ್ ಶಂಕರ್ ಮತ್ತು ಮುಜಿಬ್ ರೆಹಮಾನ್ 2 ವಿಕೆಟ್ ಪಡೆದರೆ, ಕಲೀಲ್ ಅಹಮದ್ 1 ವಿಕೆಟ್ ಪಡೆದರು.
0 comments:
Post a Comment