ನವದೆಹಲಿ, ಎಪ್ರಿಲ್ 30, 2021 (ಕರಾವಳಿ ಟೈಮ್ಸ್) : ಪೃಥ್ವಿ ಶಾ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಗುರುವಾರ ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 7 ವಿಕೆಟ್‍ಗಳ ಜಯ ಸಾಧಿಸಿದೆ.
ಗೆಲ್ಲಲು 155 ರನ್‍ಗಳ ಸವಾಲು ಪಡೆದ ಡೆಲ್ಲಿ ತಂಡ 16.3 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಈ ಮೂಲಕ ಡೆಲ್ಲಿ ತಂಡ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿತು. ಬೆಂಗಳೂರು ತಂಡ ಇದೀಗ ಮೂರಕ್ಕಿಳಿದಿದೆ.
ಆರಂಭದಿಂದಲೇ ಆಕ್ರಮಣಕಾರಿಯಾಗಿ ಆಡಿದ ಪೃಥ್ವಿ ಶಾ ಅವರು ಶಿವಂ ಮಾವಿ ಎಸೆದ ಮೊದಲ ಓವರಿನಲ್ಲಿ 6 ಬೌಂಡರಿ ಭಾರಿಸಿ ಅಬ್ಬರಿಸಿದರು. ಮೊದಲ ಬಾಲ್ ವೈಡ್ ಆಗಿದ್ದ ಕಾರಣ ಈ ಓವರಿನಲ್ಲಿ 25 ರನ್ ಬಂದಿತ್ತು.
ಶಿಖರ್ ಧವನ್ ಮತ್ತು ಪೃಥ್ವಿ ಶಾ ಮೊದಲ ವಿಕೆಟಿಗೆ 87 ಎಸೆತಗಳಲ್ಲಿ 132 ರನ್ ಜೊತೆಯಾಟವಾಡಿ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿತು. ಶಿಖರ್ ಧವನ್ 46 ರನ್ (47 ಎಸೆತ, 4 ಬೌಂಡರಿ, 1 ಸಿಕ್ಸರ್) ಭಾರಿಸಿದರೆ, ಪೃಥ್ವಿ ಶಾ 18 ಎಸೆತಗಳಲ್ಲಿ ಅರ್ಧಶತಕ ಭಾರಿಸಿದರಲ್ಲದೆ ಅಂತಿಮವಾಗಿ 82 ರನ್ (41 ಎಸೆತ, 11 ಬೌಂಡರಿ, 3 ಸಿಕ್ಸರ್) ಭಾರಿಸಿ ಔಟಾದರು. ರಿಷಭ್ ಪಂತ್ 16 ರನ್ (8 ಎಸೆತ, 2 ಬೌಂಡರಿ, 1 ಸಿಕ್ಸರ್) ಹೊಡೆದು ವಿಕೆಟ್ ಒಪ್ಪಿಸಿದರು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ಪರ ನಿತೀಶ್ ರಾಣಾ 15 ರನ್ (12 ಎಸೆತ, 1 ಬೌಂಡರಿ, 1 ಸಿಕ್ಸ್) ಶುಭಮನ್ ಗಿಲ್ 43 ರನ್ (38 ಎಸೆತ, 4 ಬೌಂಡರಿ, 1 ಸಿಕ್ಸರ್) ಸಿಡಿಸಿ ಔಟ್ ಆದರು. ಕೊನೆಯಲ್ಲಿ ಆಂಡ್ರೆ ರೆಸೆಲ್ ಅಜೇಯ 45 ರನ್ (27 ಎಸೆತ, 2 ಬೌಂಡರಿ, 4 ಸಿಕ್ಸರ್) ಭಾರಿಸಿ ತಂಡದ ಮೊತ್ತವನ್ನು 150 ರ ಗಡಿ ದಾಟಿಸಿದರು. ಅಂತಿಮವಾಗಿ ಕೋಲ್ಕತ್ತಾ 6 ವಿಕೆಟ್ ಕಳೆದುಕೊಂಡು 154 ರನ್ ಗಳಿಸಿತು.
ಡೆಲ್ಲಿ ಪರ ಲಲಿತ್ ಯಾದವ್ 3 ಓವರ್ ಎಸೆದು 13 ರನ್ ನೀಡಿ 3 ವಿಕೆಟ್ ಪಡೆದರು. ಅಕ್ಷರ್ ಪಟೇಲ್ 2 ವಿಕೆಟ್ ಕಿತ್ತರು. ಆವೇಶ್ ಖಾನ್ ಮತ್ತು ಮಾರ್ಕಸ್ ಸ್ಟೋಯ್ನಿಸ್ ತಲಾ 1 ವಿಕೆಟ್ ಪಡೆದರು.
0 comments:
Post a Comment