ಚೆನ್ನೈ, ಎಪ್ರಿಲ್ 26, 2021 (ಕರಾವಳಿ ಟೈಮ್ಸ್) : ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಇಲ್ಲಿನ ಮೈದಾನದಲ್ಲಿ ಭಾನುವಾರ ರಾತ್ರಿ ನಡೆದ ಐಪಿಎಲ್ ಪಂದ್ಯ ರೋಮಾಂಚಕ ಸಮಬಲದಲ್ಲಿ ಅಂತ್ಯಗೊಂಡಿದ್ದು, ಬಳಿಕ ನಡೆದ ಸೂಪರ್ ಓವರಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ರೋಚಕ ಜಯ ಪಡೆಯಿತು.
160 ರನ್‍ಗಳ ಸವಾಲು ಪಡೆದ ಹೈದರಾಬಾದ್ ಅಂತಿಮವಾಗಿ 20 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಈ ಮೂಲಕ ಪಂದ್ಯ ಟೈ ಆಗಿ ಅಂತ್ಯಗೊಂಡಿತು. ಬಳಿಕ ಅಳವಡಿಸಲಾದ ಸೂಪರ್ ಓವರಿನಲ್ಲಿ ಡೆಲ್ಲಿ ರೋಚಕ ಜಯ ಪಡೆಯುವ ಮೂಲಕ ಅಂಕಪಟ್ಟಿಯಲ್ಲಿ 8 ಅಂಕಗಳಿಸಿ ದ್ವಿತೀಯ ಸ್ಥಾನಕ್ಕೇರಿತು. ಆರ್.ಸಿ.ಬಿ. ಇದೀಗ ಅಂಕಪಟ್ಟಿಯಲ್ಲಿ ಕೊಂಚ ಹಿನ್ನಡೆ ಅನುಭವಿಸಿದೆ. ಹೈದರಾಬಾದ್ 7ನೇ ಸ್ಥಾನದಲ್ಲೇ ಮುಂದುವರಿದಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್‍ಗೆ ಶಿಖರ್ ಧವನ್ ಮತ್ತು ಪೃಥ್ವಿ ಶಾ 10.2 ಓವರ್ ಗಳಲ್ಲಿ 81 ರನ್‍ಗಳ ಜೊತೆಯಾಟವಾಡಿದರು. 28 ರನ್ (26 ಎಸೆತ, 3 ಬೌಂಡರಿ) ಗಳಿಸಿದ್ದ ಶಿಖರ್ ಧವನ್ ಔಟಾದ ಬೆನ್ನಲ್ಲೇ 53 ರನ್ ಗಳಿಸಿದ್ದ ಪೃಥ್ವಿ ಶಾ ಕೂಡಾ ಔಟಾದರು. ನಾಯಕ ರಿಷಭ್ ಪಂತ್ 37 ರನ್ (27 ಎಸೆತ, 4 ಬೌಂಡರಿ, 1 ಸಿಕ್ಸರ್) ಹೊಡೆದರೆ ಕೊನೆಯಲ್ಲಿ ಸ್ಟಿವ್ ಸ್ಮಿತ್ ಔಟಾಗದೇ 34 ರನ್ (25 ಎಸೆತ, 3 ಬೌಂಡರಿ, 1 ಸಿಕ್ಸರ್) ಭಾರಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಅಂತಿಮವಾಗಿ ಡೆಲ್ಲಿ 20 ಓವರ್‍ಗಳ ಮುಕ್ತಾಯಕ್ಕೆ 4 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತ್ತು.
ಹೈದರಾಬಾದ್ ಪರ ಜಾನಿ ಬೈರ್ ಸ್ಟೋ 38 ರನ್ (18 ಎಸೆತ, 3 ಬೌಂಡರಿ, 4 ಸಿಕ್ಸರ್), ಕೇನ್ ವಿಲಿಯಮ್ಸನ್ ಅಜೇಯ 66 ರನ್ (51 ಎಸೆತ, 8 ಬೌಂಡರಿ) ಸುಚಿತ್ ಅಜೇಯ 14 ರನ್ (6 ಎಸೆತ, 2 ಬೌಂಡರಿ, 1 ಸಿಕ್ಸ್) ಹೊಡೆಯುವ ಮೂಲಕ ಪಂದ್ಯವನ್ನು ರೋಚಕ ಘಟ್ಟದತ್ತ ತಂದು ನಿಲ್ಲಿಸಿದರು.
ಹೈದ್ರಾಬಾದ್ ತಂಡದ ಜಯಕ್ಕೆ ಕೊನೆಯ 12 ಎಸೆತಗಳಲ್ಲಿ 28 ರನ್ ಅವಶ್ಯಕತೆ ಇತ್ತು. ವಿಜಯ್ ಶಂಕರ್ ಹಾಗೂ ಕೇನ್ ವಿಲಿಯಮ್ಸನ್ ಕ್ರೀಸಿನಲ್ಲಿದ್ದರು. ಅವಿಶ್ ಖಾನ್ ಎಸೆದ 3ನೇ ಎಸೆತದಲ್ಲಿ ವಿಜಯ್ ಶಂಕರ್ ಬೌಲ್ಡ್ ಆದರೆ ನಂತರ ಸುಚಿತ್ ಸತತ ಎರಡು ಬೌಂಡರಿ ಭಾರಿಸಿದರು. ಈ ಓವರಿನಲ್ಲಿ 12 ರನ್ ಹರಿದು ಬಂತು. ಕೊನೆಯ 6 ಎಸೆತದಲ್ಲಿ 16 ರನ್ ಬೇಕಿತ್ತು. ರಬಡಾ ಎಸೆದ ಮೊದಲ ಬಾಲ್ ವೈಡ್ ಆಯ್ತು. ನಂತರ ಸ್ಟ್ರೈಕ್‍ನಲ್ಲಿದ್ದ ವಿಲಿಯಮ್ಸನ್ ಬೌಂಡರಿ ಸಿಡಿಸಿದರೆ ಎರಡನೇ ಎಸೆತದಲ್ಲಿ ಬೈ ಮೂಲಕ 1 ರನ್ ಬಂತು. 3ನೇ ಎಸೆತದಲ್ಲಿ ಸುಚಿತ್ ಸಿಕ್ಸರ್ ಸಿಡಿಸಿದರೆ 4ನೇ ಎಸೆತದಲ್ಲಿ ಬೈ ಮೂಲಕ 1 ರನ್ ಬಂತು. 5ನೇ ಎಸೆತದಲ್ಲಿ ವಿಲಿಯಮ್ಸನ್ 1 ರನ್ ಓಡಿದರು. ಈ ವೇಳೆ ಪಂತ್‍ಗೆ ರನೌಟ್ ಮಾಡುವ ಅವಕಾಶ ಸಿಕ್ಕಿತ್ತು. ಕೊನೆಯ ಎಸೆತದಲ್ಲಿ ಸುಚಿತ್ 1 ರನ್ ತೆಗೆದ ಕಾರಣ ಪಂದ್ಯ ಟೈ ಗೊಂಡು ಸೂಪರ್ ಓವರ್ ಮೊರೆ ಹೋಗಲಾಯಿತು.
ಸೂಪರ್ ಓವರಿನಲ್ಲಿ ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ಕಡೆಯಿಂದ ಡೇವಿಡ್ ವಾರ್ನರ್ ಹಾಗೂ ಕೇನ್ ವಿಲಿಯಮ್ಸನ್ ಆರಂಭಿಕರಾಗಿ ಕಣಕ್ಕಿಳಿದರೆ, ಡೆಲ್ಲಿ ಕಡೆಯಿಂದ ಸ್ಪಿನ್ನರ್ ಅಕ್ಷರ್ ಪಟೇಲ್ ದಾಳಿಗಾರಿಕೆ ಆರಂಭಿಸಿದರು. ಮೊದಲ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. 2ನೇ ಎಸೆತದಲ್ಲಿ ವಾರ್ನರ್ 1 ರನ್ ತೆಗೆದರು. 3ನೇ ಎಸೆತವನ್ನು ವಿಲಿಯಮ್ಸನ್ ಬೌಂಡರಿಗಟ್ಟಿದರೆ, 4ನೇ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. 5ನೇ ಎಸೆತದಲ್ಲಿ ಲೆಗ್‍ಬೈ ಮೂಲಕ 1 ರನ್ ಬಂದರೆ, 6ನೇ ಎಸೆತದಲ್ಲಿ ವಾರ್ನರ್ 1 ರನ್ ಓಡಿದರು. ಈ ಮೂಲಕ ಹೈದ್ರಾಬಾದ್ 7 ರನ್ ಗಳಿಸಿ ಡೆಲ್ಲಿಗೆ 8 ರನ್‍ಗಳ ಗುರಿ ನಿಗದಿಪಡಿಸಿತು.
ಬಳಿಕ ಡೆಲ್ಲಿ ಪರವಾಗಿ ರಿಷಬ್ ಪಂತ್ ಹಾಗೂ ಶಿಖರ್ ಧವನ್ ಬ್ಯಾಟಿಂಗ್ ಆರಂಭಿಸಿದರೆ, ಹೈದ್ರಾಬಾದ್ ಕಡೆಯಿಂದ ರಶೀದ್ ಖಾನ್ ದಾಳಿಗಾರಿಕೆ ಆರಂಭಿಸಿದರು. ಮೊದಲ ಎಸೆತದಲ್ಲಿ ಪಂತ್ 1 ರನ್ ಭಾರಿಸಿದರೆ, 2ನೇ ಎಸೆತದಲ್ಲಿ ಧವನ್ ಲೆಗ್ ಬೈ ಮೂಲಕ 1 ರನ್ ಓಡಿದರು. 3ನೇ ಎಸೆತವನ್ನು ಪಂತ್ ಬೌಂಡರಿಗಟ್ಟಿದರು. 4ನೇ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. 5ನೇ ಎಸೆದತಲ್ಲಿ ಲೆಗ್‍ಬೈ ಮೂಲಕ 1 ರನ್ ಬಂದರೆ ಕೊನೆಯ ಎಸೆತದಲ್ಲೂ ಲೆಗ್‍ಬೈ ಮೂಲಕ 1 ರನ್ ಬಂತು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಸೂಪರ್ ಓವರನ್ನು ಗೆದ್ದುಕೊಂಡಿತು.
0 comments:
Post a Comment