ಮತ್ತೆ ಬೆಂಗಳೂರಿನಿಂದ ಅಗ್ರಸ್ಥಾನ ಕಸಿದ ಚೆನ್ನೈ, ಹೈದ್ರಾಬಾದ್ ಕೊನೆಯ ಸ್ಥಾನಕ್ಕೆ
ನವದೆಹಲಿ, ಎಪ್ರಿಲ್ 28, 2021 (ಕರಾವಳಿ ಟೈಮ್ಸ್) : ಐಪಿಎಲ್ ಕೂಟದ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಆಲ್ ರೌಂಡ್ ಕ್ರಿಕೆಟ್ ಆಟದ ಪ್ರದರ್ಶನ ನೀಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೈದರಾಬಾದ್ ತಂಡದ ವಿರುದ್ಧ 7 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿದೆ.
ಗೆಲ್ಲಲು 172 ರನ್ ಗಳ ಗುರಿ ಪಡೆದ ಚೆನ್ನೈ ತಂಡ 18.3 ಓವರ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಈ ಮೂಲಕ ಅಂಕ ಪಟ್ಟಿಯಲ್ಲಿ ಆರ್‍ಸಿಬಿಯನ್ನು ಹಿಂದಿಕ್ಕಿದ ಚೆನ್ನೈ ಮತ್ತೆ ಮೊದಲ ಸ್ಥಾನಕ್ಕೇರಿದೆ. 6 ಪಂದ್ಯಗಳ ಪೈಕಿ 1 ರಲ್ಲಿ ಮಾತ್ರ ಗೆಲುವು ಸಾಧಿಸಿ 5 ಪಂದ್ಯಗಳನ್ನು ಸೋತ ಹೈದರಾಬಾದ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಚೆನ್ನೈ ತಂಡದ ಆರಂಭಿಕ ಆಟಗಾರರಾದ ಫಾಫ್ ಡುಪ್ಲೆಸಿಸ್ ಮತ್ತು ಋತುರಾಜ್ ಗಾಯಕ್ವಾಡ್ ಮತ್ತೊಮ್ಮೆ ಶತಕದ ಜೊತೆಯಾಟ ನಡೆಸಿದರು. ಋತುರಾಜ್ ಗಾಯಕ್ವಾಡ್ 75 ರನ್ (44 ಎಸೆತ, 12 ಬೌಂಡರಿ) ಭಾರಿಸಿದರೆ ಫಾಫ್ ಡುಫ್ಲೆಸಿಸ್ 56 ರನ್ (38 ಎಸೆತ, 6 ಬೌಂಡರಿ, 1 ಸಿಕ್ಸರ್) ಭಾರಿಸಿದರು. ಈ ಜೋಡಿ ಮೊದಲ ವಿಕೆಟ್ ಗೆ 79 ಎಸೆತಗಳಲ್ಲಿ 129 ರನ್ ಜೊತೆಯಾಟವಾಡಿತು. ಅಂತಿಮವಾಗಿ ರವೀಂದ್ರ ಜಡೇಜಾ 7 ರನ್ (6 ಬೌಂಡರಿ, 1 ಸಿಕ್ಸ್) ಸುರೇಶ್ ರೈನಾ 17 ರನ್ (15 ಎಸೆತ, 3 ಬೌಂಡರಿ) ಸಿಡಿಸಿ ತಂಡವನ್ನು ದಡ ಸೇರಿಸಿದರು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸನ್‍ರೈಸರ್ಸ್ ಹೈದಾರಾಬಾದ್ ತಂಡಕ್ಕೆ ಆರಂಭಿಕ ಆಟಗಾರರಿಂದ ಉತ್ತಮ ಆರಂಭ ದೊರೆಯಲಿಲ್ಲ. ಬೈರೆಸ್ಟೋವ್ ಕೇವಲ 7 ರನ್ (5 ಎಸೆತ, 1 ಬೌಂಡರಿ) ಸ್ಯಾಮ್ ಕರ್ರನ್‍ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಮನೀಶ್ ಪಾಂಡೆ ವಾರ್ನರ್ ಜೊತೆಗೂಡಿ ಭರ್ಜರಿ ಆಟವಾಡಿದರು. ಈ ಜೋಡಿ ಎರಡನೇ ವಿಕೆಟ್‍ಗೆ 87 ಎಸೆತಗಳಲ್ಲಿ 106 ರನ್ ಕಲೆಹಾಕಿ ಹೈದರಾಬಾದ್ ದೊಡ್ಡ ಮೊತ್ತ ಪೇರಿಸಲು ನೆರವಾದರು. ಉತ್ತಮವಾಗಿ ಅಡುತ್ತಿದ್ದ ಡೇವಿಡ್ ವಾರ್ನರ್ 57 ರನ್ (55 ಎಸೆತ, 3 ಬೌಂಡರಿ, 2 ಸಿಕ್ಸ್) ಸಿಡಿಸಿ ಲುಂಗಿ ಎನ್‍ಗಿಡಿಗೆ ವಿಕೆಟ್ ಒಪ್ಪಿಸಿದರು. ಅವರ ಹಿಂದೆಯೇ ಮನೀಶ್ ಪಾಂಡೆ ಕೂಡ (61 ರನ್, 46 ಎಸೆತ,5 ಬೌಂಡರಿ, 1 ಸಿಕ್ಸ್) ಸಿಡಿಸಿ ಭರ್ಜರಿ ಹೊಡೆತಕ್ಕೆ ಕೈ ಹಾಕಿ ಫಾಫ್ ಡು’ಫ್ಲೆಸಿಸ್ ಹಿಡಿದ ಉತ್ತಮ ಕ್ಯಾಚ್‍ಗೆ ಬಲಿಯಾದರು.
ಕೇನ್ ವಿಲಿಯಮ್ಸನ್ ಸ್ಪೋಟಕ ಬ್ಯಾಟಿಂಗ್ (26 ರನ್, 10 ಎಸೆತ, 4 ಬೌಂಡರಿ, 1 ಸಿಕ್ಸ್) ಸಿಡಿಸಿ ಅಜೇಯರಾಗಿ ಉಳಿದರು. ಇವರಿಗೆ ಉತ್ತಮ ಸಾಥ್ ನೀಡಿದ ಕೇದಾರ್ ಜಾಧವ್ 12 ರನ್ (4 ಬೌಂಡರಿ, 1 ಸಿಕ್ಸ್) ಸಿಡಿಸಿ ತಂಡದ ಮೊತ್ತವನ್ನು 170 ಗಡಿ ದಾಟಿಸಿದರು. ಅಂತಿಮವಾಗಿ ನಿಗದಿತ 20 ಓವರ್ ಗಳಲ್ಲಿ ಹೈದರಾಬಾದ್ ತಂಡ 3 ವಿಕೆಟ್ ಕಳೆದುಕೊಂಡು 171 ರನ್ ಕಲೆಹಾಕಿತು. ಚೆನ್ನೈ ಪರ ಲುಂಗಿ ಎನ್‍ಗಿಡಿ 2 ವಿಕೆಟ್ ಪಡೆದರೆ, ಇನ್ನೊಂದು ವಿಕೆಟ್ ಸ್ಯಾಮ್ ಕರ್ರನ್ ಪಾಲಾಯಿತು.
0 comments:
Post a Comment