ಮುಂಬೈ, ಎಪ್ರಿಲ್ 26, 2021 (ಕರಾವಳಿ ಟೈಮ್ಸ್) : ರವೀಂದ್ರ ಜಡೇಜಾ ಅವರು ಬ್ಯಾಟ್, ಬಾಲ್ ಹಾಗೂ ಫೀಲ್ಡ್ ಮೂಲಕ ತೋರಿದ ಅಮೋಘ ಪ್ರದರ್ಶನದ ಮುಂದೆ ಆರ್.ಸಿ.ಬಿ. ತಂಡದ ಘಟಾನುಘಟಿ ಬ್ಯಾಟಿಂಗ್ ಲೈನ್ ಅಪ್ ಕಕ್ಕಾಬಿಕ್ಕಿಯಾಗಿ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ನಡೆದ ಐಪಿಎಲ್ ಮುಖಾಮುಖಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ 69 ರನ್‍ಗಳ ಅರ್ಹ ಜಯ ಪಡೆಯಿತು.
ಗೆಲ್ಲಲು 192 ರನ್‍ಗಳ ಕಠಿಣ ಗುರಿ ಪಡೆದ ಆರ್ಸಿಬಿ 20 ಓವರ್‍ಗಳಲ್ಲಿ 9 ವಿಕೆಟ್ ನಷ್ಟಕ್ಕೆ 122 ರನ್‍ಗಳಿಸಿತು. ಈ ಮೂಲಕ ಸತತ 4 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಬೆಂಗಳೂರು ಈಗ ಎರಡನೇ ಸ್ಥಾನಕ್ಕೆ ಜಾರಿದೆ. ಚೆನ್ನೈ ಮೊದಲ ಸ್ಥಾನಕ್ಕೇರಿದೆ.
ಸ್ಫೋಟಕ ಬ್ಯಾಟಿಂಗ್ ಮಾಡಿದ್ದ ಜಡೇಜಾ ಔಟಾಗದೇ 62 ರನ್ (28 ಎಸೆತ, 4 ಬೌಂಡರಿ, 5 ಸಿಕ್ಸರ್) ಬಳಿಕ ವಾಷಿಂಗ್ಟನ್ ಸುಂದರ್ ಅವರನ್ನು ಕ್ಯಾಚ್ ಔಟ್ ಮಾಡಿದ್ದರೆ ಮ್ಯಾಕ್ಸ್ ವೆಲ್ ಮತ್ತು ಎಬಿಡಿ ವಿಲಿಯರ್ಸ್ ಅವರನ್ನು ಬೌಲ್ಡ್ ಮಾಡಿದರು. ಅಷ್ಟೇ ಅಲ್ಲದೇ ಡೇನಿಯಲ್ ಕ್ರಿಸ್ಟಿಯನ್ ಅವರನ್ನು ರನೌಟ್ ಮಾಡಿದರು. ಅಂತಿಮವಾಗಿ ಜಡೇಜಾ 4 ಓವರ್‍ಗಳ ಕೋಟಾದಲ್ಲಿ 1 ಮೇಡನ್ ಮಾಡಿ 13 ರನ್ ನೀಡಿ 4 ವಿಕೆಟ್ ಕಿತ್ತು ಆರ್.ಸಿ.ಬಿ. ಬೆನ್ನುಲುಬು ಮುರಿದು ಹಾಕಿದರು.
ಆರ್ಸಿಬಿ ಪರ ದೇವದತ್ ಪಡಿಕ್ಕಲ್ 34 ರನ್ (15 ಎಸೆತ, 4 ಬೌಂಡರಿ, 2 ಸಿಕ್ಸರ್) ಹೊಡೆದರೆ ಗ್ಲೇನ್ ಮ್ಯಾಕ್ಸ್ ವೆಲ್ 22 ರನ್ (15 ಎಸೆತ, 3 ಬೌಂಡರಿ), ಕೈಲೆ ಜೆಮಿಸನ್ 16 ರನ್ (13 ಎಸೆತ, 1 ಬೌಂಡರಿ, 1 ಸಿಕ್ಸರ್) ಮೊಹಮ್ಮದ್ ಸಿರಾಜ್ ಔಟಾಗದೇ 12 ರನ್ (14 ಎಸೆತ, 1 ಬೌಂಡರಿ) ಹೊಡೆದರು.
ಇಮ್ರಾನ್ ತಾಹಿರ್ 2 ವಿಕೆಟ್ ಕಿತ್ತರೆ, ಸ್ಯಾಮ್ ಕರ್ರನ್ ಮತ್ತು ಶಾರ್ದೂಲ್ ಠಾಕೂರ್ ತಲಾ ಒಂದು ವಿಕೆಟ್ ಪಡೆದರು.
ರವೀಂದ್ರ ಜಡೇಜಾ ಒಂದೇ ಓವರ್‍ನಲ್ಲಿ 5 ಸಿಕ್ಸರ್ ಚಚ್ಚಿದರೆ, ಆರ್ಸಿಬಿಯ ಹರ್ಷಲ್ ಪಟೇಲ್ ದುಬಾರಿ ರನ್ ನೀಡಿದ ಬೌಲರ್ ಎಂಬ ಕುಖ್ಯಾತಿಗೆ ಪಾತ್ರರಾದರು. 19ನೇ ಓವರ್ ಅಂತ್ಯಕ್ಕೆ ಚೆನ್ನೈ 4 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತ್ತು. ಜಡೇಜಾ 26 ರನ್ ಗಳಿಸಿದ್ದರೆ ಧೋನಿ 2 ರನ್ ಗಳಿಸಿ ಕ್ರೀಸಿನಲ್ಲಿದ್ದರು. ಕೊನೆಯ ಓವರ್ ಎಸೆಯಲು ಹರ್ಷಲ್ ಪಟೇಲ್ ಬಂದಿದ್ದರೆ ಜಡೇಜಾ ಸ್ಟ್ರೈಕ್‍ನಲ್ಲಿದ್ದರು. ಮೊದಲ ಮೂರು ಎಸೆತವನ್ನು ಜಡೇಜಾ ಸಿಕ್ಸರ್‍ಗಟ್ಟಿದರು. 3ನೇ ಎಸೆತ ನೋಬಾಲ್ ಆಗಿದ್ದ ಕಾರಣ ಫ್ರಿ ಹಿಟ್ ಸಿಕ್ಕಿತು. ಈ ಎಸೆತವನ್ನು ಸಿಕ್ಸರ್‍ಗೆ ಅಟ್ಟಿದರೆ 4ನೇ ಎಸೆತದಲ್ಲಿ 2 ರನ್ ಬಂತು. 5ನೇ ಎಸೆತದಲ್ಲಿ ಸಿಕ್ಸರ್ ಬಂದರೆ 6ನೇ ಎಸೆತದಲ್ಲಿ 4 ರನ್ ಬಂತು.
5 ಸಿಕ್ಸ್, 1 ಬೌಂಡರಿ, 2 ರನ್ ಹೊಡೆಯುವ ಮೂಲಕ ಜಡೇಜಾ 36 ರನ್ ಹೊಡೆದರೆ ಒಂದು ನೋಬಾಲ್ ಹಾಕಿದ ಕಾರಣ 37 ರನ್ ಬಂತು. ಈ ಹಿಂದೆ 2011ರಲ್ಲಿ ಕೊಚ್ಚಿನ್ ಟಸ್ಕರ್ಸ್ ತಂಡದ ಪರಮೇಶ್ವರನ್ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ 37 ರನ್ ನೀಡಿದ್ದರು.
ಹರ್ಷಲ್ ಪಟೇಲ್ 4 ಓವರ್ ಎಸೆದು 3 ವಿಕೆಟ್ ಕಿತ್ತು 51 ರನ್ ನೀಡಿದರೆ ಚಹಲ್ 24 ರನ್ ನೀಡಿ 1 ವಿಕೆಟ್ ಕಿತ್ತರು. ಜಡೇಜಾ ಔಟಾಗದೇ 62 ರನ್ (28 ಎಸೆತ, 4 ಬೌಂಡರಿ, 5 ಸಿಕ್ಸರ್) ಭಾರಿಸಿದರೆ, ಡು ಪ್ಲೆಸಿಸ್ 50 ರನ್ (41 ಎಸೆತ, 5 ಬೌಂಡರಿ, 1 ಸಿಕ್ಸರ್), ಋತುರಾಜ್ ಗಾಯಕ್ವಾಡ್ 33 ರನ್ (25 ಎಸೆತ, 4 ಬೌಂಡರಿ, 1 ಸಿಕ್ಸರ್) ಭಾರಿಸಿ ಔಟಾದರು. ಅಂತಿಮವಾಗಿ ಚೆನ್ನೈ 4 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತು.
0 comments:
Post a Comment