ಮುಂಬೈ, ಎಪ್ರಿಲ್ 22, 2021 (ಕರಾವಳಿ ಟೈಮ್ಸ್) : ಐಪಿಎಲ್ 14ನೇ ಆವೃತ್ತಿಯ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಫಾಫ್ ಡುಪ್ಲೆಸಿಸ್ ಅವರ ಭರ್ಜರಿ 95 ರನ್ ಹಾಗೂ ಋತುರಾಜ್ ಗಾಯಕ್ವಾಡ್ ಅರ್ಧ ಶತಕದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ 18 ರನ್‍ಗಳಿಂದ ಜಯ ಸಾಧಿಸಿದೆ.
ಗೆಲ್ಲಲು 221 ರನ್‍ಗಳ ಕಠಿಣ ಸವಾಲು ಪಡೆದ ಕೋಲ್ಕತ್ತಾ, 20 ಓವರ್‍ಗಳಲ್ಲಿ 202 ರನ್‍ಗಳಿಗೆ ಅಲೌಟ್ ಆಯಿತು. ಆಂಡ್ರೆ ರಸೆಲ್, ಪ್ಯಾಟ್ ಕಮ್ಮಿನ್ಸ್, ದಿನೇಶ್ ಕಾರ್ತಿಕ್ ಹೊರತುಪಡಿಸಿ ಉಳಿದ ಆಟಗಾರರ್ಯಾರೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲರಾದ ಕಾರಣ ಕೋಲ್ಕತ್ತಾ ಸೋಲನುಭವಿಸುವಂತಾಯಿತು. ಸತತ ಪಂದ್ಯಗಳ ಗೆಲುವಿನೊಂದಿಗೆ ಇದೀಗ ಚೆನ್ನೈ ತಂಡ ಆರ್.ಸಿ.ಬಿ. ತಂಡವನ್ನು ಹಿಂದಿಕ್ಕಿದ್ದು, ಅಂಕ ಪಟ್ಟಿಯಲ್ಲಿ ಅಗ್ರಪಟ್ಟಕ್ಕೇರಿದೆ.
ಆಂಡ್ರೆ ರಸೆಲ್ 54 ರನ್ (22 ಎಸೆತ, 3 ಬೌಂಡರಿ, 6 ಸಿಕ್ಸ್) ಹಾಗೂ ಪ್ಯಾಟ್ ಕಮ್ಮಿನ್ಸ್ ಔಟಾಗದೇ 66 ರನ್ (34 ಎಸೆತ, 4 ಬೌಂಡರಿ, 6 ಸಿಕ್ಸ್) ಆರ್ಭಟಿಸಿದರೂ ಪ್ರಯೋಜನವಾಗಲಿಲ್ಲ. ದಿನೇಶ್ ಕಾರ್ತಿಕ್ 40 ರನ್ (24 ಎಸೆತ, 4 ಬೌಂಡರಿ, 2 ಸಿಕ್ಸ್) ಬಾರಿಸಿ ಔಟಾದರು. ಚೆನ್ನೈ ಪರ ದೀಪಕ್ ಚಹರ್ 4 ವಿಕೆಟ್ ಕಿತ್ತರೆ, ಲುಂಗಿ ಎನ್ಗಿಡಿ 3 ಹಾಗೂ ಸ್ಯಾಮ್ ಕರ್ರನ್ 1 ವಿಕೆಟ್ ಪಡೆದರು.
ಚೆನ್ನೈ ಪರ ಅದ್ಭುತ ಬ್ಯಾಟಿಂಗ್ ನಡೆಸಿದ ಪಾಪ್ ಡುಪ್ಲೆಸಿಸ್ 95 ಎನ್ (60 ಎಸೆತ, 4 ಸಿಕ್ಸರ್, 9 ಬೌಂಡರಿ) ಸಿಡಿಸಿ ಶತಕ ವಂಚಿತರಾದರು. ಋತುರಾಜ್ ಗಾಯಕ್ವಾಡ್ 64 ರನ್ (42 ಎಸೆತ, 6 ಬೌಂಡರಿ, 4 ಸಿಕ್ಸರ್) ಸಿಡಿಸಿದರು. ಮೊಯಿನ್ ಅಲಿ 25 ರನ್ (12 ಎಸೆತ, 2 ಬೌಂಡರಿ, 2 ಸಿಕ್ಸ್) ಬಾರಿಸಿ ತಂಡದ ಮೊತ್ತ ಏರಿಕೆಗೆ ಕಾರಣರಾದರು.
0 comments:
Post a Comment