ಮಂಗಳೂರು, ಎ. 21 (ಕರಾವಳಿ ಟೈಮ್ಸ್) : ತಾಲೂಕಿನ ಹಳೆಯಂಗಡಿ ಸಮೀಪ ಮನೆಯಂಗಳದಲ್ಲಿ ಆಟವಾಡುತ್ತಿದ್ದ ಸಂದರ್ಭ ಸಿಡಿಲು ಬಡಿದು ಗಂಭೀರ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಇಬ್ಬರು ಮಕ್ಕಳ ಪೈಕಿ ಓರ್ವ ಬಾಲಕ ಹಳೆಯಂಗಡಿ-ಇಂದಿರಾನಗರ ನಿವಾಸಿ ಮನ್ಸೂರ್ ಅವರ ಪುತ್ರ ನಿಹಾನ್ (5) ಬುಧವಾರ ಮೃತಪಟ್ಟಿದ್ದಾನೆ.
ಉತ್ತರ ಕನ್ನಡ ಜಿಲ್ಲೆಯ ಗಂಗಾವತಿ ಮೂಲದ ದುರ್ಗಪ್ಪ ಎಂಬವರ ಪುತ್ರ ಮಾರುತಿ (6) ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಮಂಗಳವಾರ ಸಂಜೆ ಮನೆಯಂಗಳದಲ್ಲಿ ಐದಾರು ಮಂದಿ ಮಕ್ಕಳು ಆಟವಾಡುತ್ತಿದ್ದ ವೇಳೆ ಸಿಡಿಲು ಬಡಿದ ಪರಿಣಾಮ ಮಕ್ಕಳು ಮೂರ್ಛೆ ಹೋಗಿದ್ದು, ತಕ್ಷಣ ಸ್ಥಳೀಯರು ಮಕ್ಕಳನ್ನು ಮುಕ್ಕ ಆಸ್ಪತ್ರೆಗೆ ದಾಖಲಿಸಿದ್ದರು. ಈ ಪೈಕಿ ನಿಹಾನ್ ಹಾಗೂ ಮಾರುತಿ ಗಂಭೀರ ಗಾಯಗೊಂಡಿದ್ದ ಪರಿಣಾಮ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿತ್ತು. ಬುಧವಾರ ನಿಹಾನ್ ಮೃತಪಟ್ಟಿದ್ದಾನೆ.
ಮೃತ ನಿಹಾನ್ ತಂದೆ ಮನ್ಸೂರ್ ಟೈಲರಿಂಗ್ ವೃತ್ತಿ ನಡೆಸುತ್ತಿದ್ದು, ತನ್ನ ಓರ್ವ ಪುತ್ರ ಹಾಗೂ ಓರ್ವ ಪುತ್ರಿಯ ಪೈಕಿ ಪುತ್ರನನ್ನು ಕಳೆದುಕೊಂಡು ತೀವ್ರ ಮಾನಸಿಕ ಆಘಾತ ಎದುರಿಸುವಂತಾಗಿದೆ.
0 comments:
Post a Comment