ಧರ್ಮಸ್ಥಳ, ಎಪ್ರಿಲ್ 09, 2021 (ಕರಾವಳಿ ಟೈಮ್ಸ್) : ಶ್ರೀ ಕ್ಷೇತ್ರ ಧರ್ಮಸ್ಥಳ ಭೇಟಿಗಾಗಿ ಬಂದಿದ್ದ ಉತ್ತರ ಕನ್ನಡ ಮೂಲದ ಮಹಿಳೆಯ ಚಿನ್ನಾಭರಣ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಗದಗ ಜಿಲ್ಲೆ ಅಸುಂಡಿ ಗ್ರಾಮದ ಲಕ್ಷ್ಮೀಶ್ವರ ರಸ್ತೆ, ರಾಧಾಕೃಷ್ಣ ನಗರ ನಿವಾಸಿ ದಿವಂಗತ ಬಸಪ್ಪ ಎಂಬವರ ಮಗ ಸಿದ್ದಾರ್ಥ (26) ಹಾಗೂ ಆತನ ಪತ್ನಿ ದ್ರಾಕ್ಷಾಯಿಣಿ ಕೊರಚರ (26) ಎಂಬವರನ್ನು ಧರ್ಮಸ್ಥಳ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕು, ಚಿಪಗಿ ಗ್ರಾಮದ ಸೋಮನಹಳ್ಳಿ, ಶಿವನಿಲಯ ನಿವಾಸಿ ಚಂದ್ರಶೇಖರ ನಾರಾಯಣ ನಾಯ್ಕ ಅವರ ಪತ್ನಿ ಕಲ್ಪನಾ ಚಂದ್ರಶೇಖರ ನಾಯ್ಕ್ (36) ಎಂಬವರು ಎಪ್ರಿಲ್ 1 ರಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದಿದ್ದು, ಬೆಳಿಗ್ಗೆ 7.00 ಗಂಟೆಗೆ ದೇವರ ದರ್ಶನ ಮಾಡುವರೇ ದೇವಸ್ಥಾನದ ಒಳಗೆ ಪ್ರವೇಶಿಸಿ ಬೆಳಿಗ್ಗೆ 7-30 ಗಂಟೆಗೆ ದೇವರ ದರ್ಶನ ಮುಗಿಸಿ ಹೊರಗಡೆ ಬಂದಾಗ ಅವರ ತಾಯಿ ಭವಾನಿ ಅವರು ಹಿಡಿದುಕೊಂಡಿದ್ದ ವ್ಯಾನಿಟಿ ಬ್ಯಾಗಿನಲ್ಲಿದ್ದ ಸುಮಾರು 40 ಗ್ರಾಂ ತೂಕದ ಶ್ರೀ ಗಣಪತಿ ದೇವರ ಮೂರ್ತಿ ಪೆಂಡೆಂಟ್ ಇರುವ ಚಿನ್ನದ ಸರ ಹಾಗೂ 40 ಗ್ರಾಂ ತೂಕದ ಚಿನ್ನದ ಬ್ರಾಸ್ ಲೈಟ್ ಇದ್ದ ಸ್ಟೀಲ್ ಕರಡಿಗೆ ಕಳವಾಗಿತ್ತು. ಸುಮಾರು 85 ಗ್ರಾಂ ತೂಕದ ಚಿನ್ನಾಭರಣ ಕಳವಾಗಿದ್ದು, ಕಳವಾಗಿರುವ ಚಿನ್ನಾಭರಣದ ಮೌಲ್ಯ 3.20 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿತ್ತು. ಈ ಬಗ್ಗೆ ಧರ್ಮಸ್ಥಳ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 21/2021 ಕಲಂ 379 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಜಿಲ್ಲಾ ಎಸ್ಪಿ ಋಷಿಕೇಶ್ ಸೋನಾನವನೆ ಅವರ ನಿರ್ದೇಶನದಂತೆ ಬಂಟ್ವಾಳ ಡಿವೈಎಸ್ಪಿ ವೆಲೈಂಟಿನ್ ಡಿ’ಸೋಜಾ ಅವರ ಸೂಚನೆಯಂತೆ ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ. ಅವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಪೆÇಲೀಸ್ ಠಾಣಾ ಪಿಎಸ್ಸೈ ಪವನ್ ನಾಯಕ್ ಹಾಗೂ ಸಿಬ್ಬಂದಿಗಳಾದ ಬೆನ್ನಿಚ್ಚನ್, ಪ್ರಶಾಂತ, ರಾಹುಲ್ ರಾವ್ ಅವರುಗಳು ಕಾರ್ಯಪ್ರವೃತ್ತರಾಗಿ ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ ಕೃತ್ಯಕ್ಕೆ ಉಪಯೋಗಿಸಿದ ಇನ್ನೋವಾ ಕಾರು ಹಾಗೂ ಕಳವಾದ ಒಟ್ಟು 85 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
0 comments:
Post a Comment