ಮುಂಬೈ, ಎಪ್ರಿಲ್ 18, 2021 (ಕರಾವಳಿ ಟೈಮ್ಸ್) : ಶಿಖರ್ ಧವನ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಭಾನುವಾರ ರಾತ್ರಿ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 14ನೇ ಆವೃತ್ತಿಯ ವೀಕೆಂಡ್ ದ್ವಿತೀಯ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಇಲೆವೆನ್ ವಿರುದ್ಧ 6 ವಿಕೆಟ್‍ಗಳ ಭರ್ಜರಿ ಜಯ ದಾಖಲಿಸಿದೆ.
ಗೆಲ್ಲಲು 196 ರನ್‍ಗಳ ಕಠಿಣ ಗುರಿಯನ್ನು ಸವಾಲಾಗಿ ಸ್ವೀಕರಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 18.2 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿ ಜಯಭೇರಿ ಭಾರಿಸಿತು. ಆಡಿದ ಮೂರು ಪಂದ್ಯಗಳಲ್ಲಿ 2 ರಲ್ಲಿ ಜಯ ಪಡೆದ ಡೆಲ್ಲಿ ಇದೀಗ ಅಂಕಪಟ್ಟಿಯಲ್ಲಿ ಬೆಂಗಳೂರು ನಂತರದಲ್ಲಿ 2ನೇ ಸ್ಥಾನದಲ್ಲಿದೆ.
ಆರಂಭಿಕ ಆಟಗಾರ ಪೃಥ್ವಿ ಶಾ ಮತ್ತು ಶಿಖರ್ ಧವನ್ ಮೊದಲ ವಿಕೆಟ್‍ಗೆ 59 ರನ್ ಜೊತೆಯಾಟವಾಡಿ ಉತ್ತಮ ಅಡಿಪಾಯ ಹಾಕಿದರು. ಪೃಥ್ವಿ ಶಾ 32 ರನ್ (17 ಎಸೆತ, 3 ಬೌಂಡರಿ, 2 ಸಿಕ್ಸರ್) ಭಾರಿಸಿದರೆ, ಸ್ಟೀವ್ ಸ್ಮಿತ್ 9 ರನ್ ಗಳಿಸಿ ಔಟಾದರು. ಸ್ಫೋಟಕ ಆಟವಾಡಿದ ಶಿಖರ್ ಧವನ್ 92 ರನ್ (48 ಎಸೆತ, 2 ಸಿಕ್ಸರ್, 13 ಬೌಂಡರಿ) ಭಾರಿ 8 ರನ್‍ಗಳಿಂದ ಶತಕ ವಂಚಿತರಾಗಿ 14.5 ಓವರ್‍ಗಳಲ್ಲಿ ತಂಡದ ಮೊತ್ತ 152 ಆಗಿದ್ದಾಗ ಔಟಾದರು. ರಿಷಭ್ ಪಂತ್ 15 ರನ್ ಭಾರಿಸಿದರೆ, ಮಾರ್ಕಸ್ ಸ್ಟೋಯಿನ್ಸ್ ಅಜೇಯ 27 ರನ್ (13 ಎಸೆತ, 3 ಬೌಂಡರಿ, 1 ಸಿಕ್ಸರ್), ಲಲಿತ್ ಯಾದವ್ ಅಜೇಯ 12 ರನ್ (6 ಎಸೆತ, 1 ಬೌಂಡರಿ) ಭಾರಿಸಿ ತಂಡದ ಗೆಲುವಿನ ಔಪಚಾರಿಕತೆ ಪೂರೈಸಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಡೆದ ಪಂಜಾಬ್ ಕಿಂಗ್ಸ್ ಭರ್ಜರಿ ಆರಂಭವನ್ನು ಪಡೆದುಕೊಂಡಿತು. ಕೆ.ಎಲ್. ರಾಹುಲ್ 61 ರನ್ (51 ಎಸೆತ, 7 ಬೌಂಡರಿ, 2 ಸಿಕ್ಸರ್), ಮಯಾಂಕ್ ಅಗರ್‍ವಾಲ್ 69 ರನ್ (36 ಎಸೆತ, 7 ಬೌಂಡರಿ, 4 ಸಿಕ್ಸರ್) ಸಿಡಿಸಿ ಮೊದಲ ವಿಕೆಟ್‍ಗೆ 77 ಎಸೆತದಲ್ಲಿ 122 ರನ್ ಕಲೆ ಹಾಕಿತು.
12ನೇ ಓವರಿನಲ್ಲಿ ಕಗಿಸೋ ರಬಾಡ ಮಯಾಂಕ್ ವಿಕೆಟ್ ಕಬಳಿಸುವ ಮೂಲಕ ರನ್ ವೇಗವನ್ನು ನಿಯಂತ್ರಿಸಿದರು. ನಂತರ ಬಂದ ಕ್ರೀಸ್ ಗೇಲ್ 11 ರನ್ (9 ಎಸೆತ, 1 ಸಿಕ್ಸ್) ಸಿಡಿಸಿ ಔಟಾದರು. ದೀಪಕ್ ಹೂಡ 22 ರನ್ ( 13 ಎಸೆತ, 2 ಸಿಕ್ಸರ್), ಶಾರುಖ್ ಖಾನ್ 15 ರನ್ (5 ಎಸೆತ, 2 ಬೌಂಡರಿ, 1 ಸಿಕ್ಸರ್) ಸಿಡಿಸಿ ಪಂಜಾಬ್ ತಂಡದ ರನ್ 190ರ ಗಡಿ ದಾಟಿಸಿದರು. ಈ ಜೋಡಿ 5ನೇ ವಿಕೆಟಿಗೆ 7 ಎಸೆತಗಳಲ್ಲಿ ಅಜೇಯ 16 ರನ್ ಜೊತೆಯಾಟ ನಡೆಸಿತು. ಡೆಲ್ಲಿ ಪರ ಎಲ್ಲಾ ದಾಳಿಗಾರರು ಬಹಳಷ್ಟು ದುಬಾರಿ ದಾಳಿಗಾರಿಕೆ ನಡೆಸಿದರು.
0 comments:
Post a Comment