ಮಂಗಳೂರು, ಎಪ್ರಿಲ್ 04, 2021 (ಕರಾವಳಿ ಟೈಮ್ಸ್) : ಕೆ.ಸಿ.ರೋಡಿನಲ್ಲಿ ನಡೆದ 12 ವರ್ಷದ ಬಾಲಕನ ಕೊಲೆ ಪ್ರಕರಣವನ್ನು ಸ್ವತಃ ಕೈಗೆತ್ತಿಕೊಂಡು ತನಿಖೆಗೆ ಚಾಲನೆ ನೀಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಈ ಬಗ್ಗೆ ಮಾತನಾಡಿ ಬಾಲಕನ ಕೊಲೆಗೆ ತೀವ್ರ ಆಘಾತ ವ್ಯಕ್ತಪಡಿಸಿದರಲ್ಲದೆ ತನ್ನ ಮನೆ ಹುಡುಗನಿಗಾದ ಘಟನೆಯೆಂದು ಭಾವಿಸಿ ತನಿಖೆ ಕೈಗೆತ್ತಿಕೊಳ್ಳುತ್ತೇನೆ. ಹಂತಕ ಯಾರೇ ಇದ್ದರೂ ಸುಲಭದಲ್ಲಿ ತಪ್ಪಿಸಿಕೊಳ್ಳದಂತೆ ಕಠಿಣ ಕ್ರಮ ಜರುಗಿಸುತ್ತೇನೆ ಎಂದು ಮನೆ ಮಂದಿ ಹಾಗೂ ಸ್ಥಳೀಯರಿಗೆ ಭರವಸೆ ನೀಡಿದರು.
ಮನೆಯ ಸಣ್ಣ ಮಕ್ಕಳಿಗೆ ಬೈಯುವುದು, ಹೊಡೆಯುವುದು ನಡೆದರೂ ಸಹಿಸಲಿಕ್ಕೆ ಸಾಧ್ಯವಿಲ್ಲ. ಹೀಗಿರುತ್ತಾ ಅಪ್ರಾಪ್ತ ಬಾಲಕನ ಬರ್ಬರ ಕೊಲೆ ನೋಡಲೂ ಸಹಿಸಲೂ ಸಾಧ್ಯವಿಲ್ಲದ ಘಟನೆಯಾಗಿದ್ದು, ಈ ಕೊಲೆಯ ಹಿಂದೆ ಯಾವ ಉದ್ದೇಶವಿದೆ, ಆರೋಪಿಗಳು ಯಾರಿದ್ದಾರೆ ಎಂಬುದೆಲ್ಲವನ್ನೂ ಸಮಗ್ರ ತನಿಖೆಗೊಳಪಡಿಸಿ ಆರೋಪಿಗಳು ಜೀವನ ಪರ್ಯಂತ ಜೈಲಲ್ಲಿ ಕೊಳೆಯಬೇಕು ಅಥವಾ ಕಾನೂನು ರೀತಿಯಲ್ಲಿ ನೇಣಿಗೇರಿಸಬೇಕು ಎಂಬ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಕಮಿಷನರ್ ಶಶಿಕುಮಾರ್ ಇದಕ್ಕಿಂತ ಹೆಚ್ಚಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದರಲ್ಲದೆ ಪ್ರಕರಣ ಬೇಧಿಸುವವರೆಗೂ ಇಲ್ಲೇ ಇರುತ್ತೇನೆ. ಉಳ್ಳಾಲ ಠಾಣೆಯಲ್ಲೇ ಇದ್ದು ಘಟನೆಯ ಸಮಗ್ರ ತನಿಖೆಗೆ ನೇತೃತ್ವ ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
0 comments:
Post a Comment