ಲಕ್ನೋ, ಎಪ್ರಿಲ್ 15, 2021 (ಕರಾವಳಿ ಟೈಮ್ಸ್) : ಕೊರೊನಾ ಪ್ರಕರಣಗಳ ತೀವ್ರಗತಿಯ ಏರಿಕೆಯಿಂದ ಆಘಾತಗೊಂಡಿರುವ ಉತ್ತರ ಪ್ರದೇಶ ಸರಕಾರ 1 ರಿಂದ 12ನೇ ತರಗತಿವರೆಗೆ ರಜೆ ನೀಡಿದ್ದು, ಯುಪಿ ಬೋರ್ಡ್ ಪರೀಕ್ಷೆಗಳನ್ನು ಮುಂದೂಡಿ ಆದೇಶಿಸಿದೆ.
ಮೇ ತಿಂಗಳಲ್ಲಿ ನಡೆಯಬೇಕಿದ್ದ ಪರೀಕ್ಷೆಗಳ ದಿನಾಂಕಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ರಜಾ ದಿನಗಳನ್ನು ಅನಾವಶ್ಯಕವಾಗಿ ಕಳೆಯದೆ ವ್ಯಾಸಂಗಕ್ಕೆ ಸಂಬಂಧಪಟ್ಟ ಅಭ್ಯಾಸ ಮಾಡುವಂತೆ ಶಿಕ್ಷಣಾಧಿಕಾರಿಗಳು ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿ ಬುಧವಾರ 22,439 ಮಂದಿಗೆ ಸೋಂಕು ತಗುಲಿದೆ. ಲಕ್ನೋ ನಗರದಲ್ಲಿಯೇ 5,183 ಜನಕ್ಕೆ ಸೋಂಕು ತಗುಲಿದೆ. ಬುಧವಾರ ಸಿಎಂ ಯೋಗಿ ಆದಿತ್ಯನಾಥ್ ಅವರು ಕೊರೊನಾ ಸೋಂಕಿಗೆ ತುತ್ತಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಈಗಾಗಲೇ ಸಿಬಿಎಸ್‍ಸಿ 10ನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸಿ ಹಾಗೂ 12ನೇ ತರಗತಿ ಪರೀಕ್ಷೆ ಮುಂದೂಡಿ ಬುಧವಾರವಷ್ಟೆ ಆದೇಶಿಸಿತ್ತು. 10ನೇ ತರಗತಿಗೆ ನಿಗದಿಪಡಿಸಿದ ಮಾನದಂಡದ ಆಧಾರದ ಮೇಲೆ ಫಲಿತಾಂಶ ಪ್ರಕಟಿಸುವುದಾಗಿ ಹೇಳಿಕೊಂಡಿತ್ತು. 12ನೇ ತರಗತಿ ಪರೀಕ್ಷೆ ಬಗ್ಗೆ, ಜೂನ್ 1ರಂದು ಮತ್ತೊಮ್ಮೆ ಪರಿಶೀಲನೆ ಮಾಡುವುದಾಗಿ ಹೇಳಿತ್ತು. ಪರೀಕ್ಷೆಗೂ ಮೊದಲು ಕನಿಷ್ಠ 15 ದಿನಗಳ ಮೊದಲೇ ದಿನಾಂಕ ಪ್ರಕಟಿಸಲಾಗುವುದು ಎಂದು ಕೂಡಾ ಸಿಬಿಎಸ್‍ಸಿ ತಿಳಿಸಿತ್ತು.
ಕೊರೋನಾಘಾತಕ್ಕೆ ದೇಶಾದ್ಯಂತ ಶೈಕ್ಷಣಿಕ ವ್ಯವಸ್ಥೆಗಳು ಅಲ್ಲೋಲ-ಕಲ್ಲೋಲವಾಗುತ್ತಿದ್ದು, ರಾಜಸ್ಥಾನದಲ್ಲೂ 10 ಹಾಗೂ 12ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ಮುಂದೂಡಲಾಗಿದೆ.
0 comments:
Post a Comment