ಬಂಟ್ವಾಳ, ಎಪ್ರಿಲ್ 24, 2021 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ನೇತ್ರಾವತಿ ಸೇತುವೆ ಮೇಲಿಂದ ಶುಕ್ರವಾರ ಸಂಜೆ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕನನ್ನು ಗೂಡಿನಬಳಿ ನಿವಾಸಿ ಜೀವರಕ್ಷಕರಾದ ಸತ್ತಾರ್ ಗೂಡಿನಬಳಿ ಹಾಗೂ ಸ್ವಾದಿಕ್ ಎಂ ಕೆ ಎಂಬವರು ನದಿಗೆ ಧುಮುಕಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶ್ರವಣ ಬೆಳಗೊಳ ಮೂಲದ ಯುವಕ ಶುಕ್ರವಾರ ಸಂಜೆ ಪಾಣೆಮಂಗಳೂರು ಹೊಸ ನೇತ್ರಾವತಿ ಸೇತುವೆ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈತ ನದಿಗೆ ಹಾರುವುದನ್ನು ಕಂಡ ಸ್ಥಳೀಯರು, ರಂಝಾನ್ ಇಫ್ತಾರಿಗಾಗಿ ಮನೆಗೆ ತೆರಳುತ್ತಿದ್ದ ಸತ್ತಾರ್ ಅವರಿಗೆ ಸುದ್ದಿ ತಲುಪಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಸತ್ತಾರ್ ಅವರು ಸ್ವಾದಿಕ್ ಅವರ ಜೊತೆಗೂಡಿ ನದಿಗೆ ಧುಮುಕಿ ಯುವಕನನ್ನು ರಕ್ಷಿಸಿ ಮೇಲಕ್ಕೆತ್ತುವಲ್ಲಿ ಸಫಲರಾಗಿದ್ದಾರೆ.
ಬಳಿಕ ಯುವಕನನ್ನು ಪೊಲೀಸರ ಸಹಾಯದಿಂದ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಪೊಲೀಸರು ಆತನ ಸಂಬಂಧಿಕರನ್ನು ಸಂಪರ್ಕಿಸಿ ಸುದ್ದಿ ಮುಟ್ಟಿಸಿದ್ದಾರೆ. ಕಾರ್ಕಳ ಸಮೀಪದ ಬಜಗೋಳಿ ನಿವಾಸಿಗಳಾದ ಯುವಕನ ಸಂಬಂಧಿಕರು ಆಸ್ಪತ್ರೆಗೆ ಧಾವಿಸಿ ಯುವಕನನ್ನು ಕರೆದುಕೊಂಡು ಹೋಗಿದ್ದಾರೆ.
ವೃತ್ತಿಯಲ್ಲಿ ಅಟೋ ಚಾಲಕನಾಗಿರುವ ಸತ್ತಾರ್ ಗೂಡಿನಬಳಿ ಅವರು ಈ ಹಿಂದೆ ಇಂತಹ ಅನೇಕ ಸಾಹಸಿ ಕಾರ್ಯಗಳನ್ನು ನಡೆಸಿದ್ದಲ್ಲದೆ ತನ್ನ ಅಟೋ ರಿಕ್ಷಾದಲ್ಲಿ ಪ್ರಯಾಣಿಕರು ಬಿಟ್ಟು ಹೋಗಿದ್ದ ಬೆಲೆ ಬಾಳುವ ಸೊತ್ತುಗಳನ್ನು ಹಿಂತಿರುಗಿಸಿ ಹಲವು ಬಾರಿ ಪ್ರಾಮಾಣಿಕತೆ ಮೆರೆದು ಸುದ್ದಿಯಾಗಿದ್ದರು. ಇವರ ಈ ಎಲ್ಲಾ ಸಾಧನೆಗಳಿಗಾಗಿ ಕರ್ನಾಟಕ ಸರಕಾರ ಕಳೆದ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿರುವುದನ್ನು ಈ ಸಂಧರ್ಭ ಸ್ಮರಿಸಿಕೊಳ್ಳಬಹುದು.
0 comments:
Post a Comment