ಬಂಟ್ವಾಳ, ಎಪ್ರಿಲ್ 05, 2021 (ಕರಾವಳಿ ಟೈಮ್ಸ್) : ಇಲ್ಲಿನ ನಗರ ಠಾಣಾ ವ್ಯಾಪ್ತಿಯ ಅಜ್ಜಿಬೆಟ್ಟು ಕ್ರಾಸ್ ರಸ್ತೆ ಬಳಿ ನಿಂತಿದ್ದ ವ್ಯಕ್ತಿಗೆ ಬೈಕಿನಲ್ಲಿ ಬಂದ ಇನ್ನಿಬ್ಬರು ಅಪರಿಚ ವ್ಯಕ್ತಿಗಳು ಇರಿದು ಪರಾರಿಯಾದ ಘಟನೆ ಭಾನುವಾರ ರಾತ್ರಿ ವರದಿಯಾಗಿದೆ.
ತಾಲೂಕಿನ ತುಂಬೆ ಸಮೀಪದ ವಳವೂರು-ಉಮ್ಮನಗುಡ್ಡೆ ನಿವಾಸಿ ಭೋಜ ಸಪಲ್ಯ ಎಂಬವರ ಮಗ ಮನೋಜ್ ಭೋಜ್ ಗಾಣಿಗ (33) ಅವರು ಭಾನುವಾರ ರಾತ್ರಿ ವೇಳೆ ತುಂಬೆಯಿಂದ ಬೈಕಿನಲ್ಲಿ ಬಿ ಸಿ ರೋಡು ಕಡೆಗೆ ಬಂದು ಬಿ ಸಿ ರೋಡು-ಅಜ್ಜಿಬೆಟ್ಟು ಕ್ರಾಸ್ ರಸ್ತೆಯ ಎಚ್.ಡಿ.ಎಫ್.ಸಿ. ಬ್ಯಾಂಕ್ ಎಟಿಎಂ ಬಳಿ ಇರುವ ಉಮೇಶ್ ಅವರ ಅಂಗಡಿ ಬಳಿ ಎಂದಿನಂತೆ ಬೈಕ್ ನಿಲ್ಲಿಸಿ ತನ್ನ ಭಾವ ದಿನೇಶ್ ಅವರೊಂದಿಗೆ ಮೊಬೈಲಿನಲ್ಲಿ ಮಾತನಾಡುತ್ತಿದ್ದ ವೇಳೆ ಇನ್ನೊಂದು ಬೈಕಿನಲ್ಲಿ ಬಂದ ಇಬ್ಬರು ವ್ಯಕ್ತಿಗಳ ಪೈಕಿ ಹಿಂಬದಿ ಸವಾರ ತನ್ನ ಕೈಯಲ್ಲಿದ್ದ ಕತ್ತಿಯಿಂದ ಯದ್ವಾತದ್ವಾ ಇರಿದು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಹಲ್ಲೆ ನಡೆದ ದುಷ್ಕರ್ಮಿಗಳು ಹೆಲ್ಮೆಟ್ ಧಾರಿಗಳಾಗಿದ್ದು, ಓರ್ವ ವ್ಯಕ್ತಿ ಸುಮಾರು 35 ರಿಂದ 40 ವರ್ಷದ ವಯಸ್ಸಿನವನಾಗಿದ್ದು, ಇನ್ನೊಬ್ಬ ವ್ಯಕ್ತಿ 25 ರಿಂದ 30 ವಯಸ್ಸಿನವನಾಗಿರುತ್ತಾನೆ ಎಂದು ಗಾಯಾಳು ಅಂದಾಜಿಸಿದ್ದಾರೆ.
ಹಲ್ಲೆ ಸಂದರ್ಭ ಮನೋಜ್ ಅವರು ಬೊಬ್ಬೆ ಹೊಡೆದಿದ್ದು, ಈ ಸಂದರ್ಭ ಅಂಗಡಿಯ ಉಮೇಶ ಹಾಗೂ ಎಚ್.ಡಿ.ಎಫ್.ಸಿ. ಬ್ಯಾಂಕ್ ಎಟಿಎಂ ಸೆಕ್ಯುರಿಟ್ ಓಡಿ ಬಂದಿದ್ದಾರೆ. ಈ ಸಂದರ್ಭ ಹಲ್ಲೆಕೋರರು ಬಂದ ಬೈಕಿನಲ್ಲೇ ಪರಾರಿಯಾಗಿದ್ದಾರೆ. ತಕ್ಷಣ ಸ್ಥಳೀಯರು ಜಮಾಯಿಸಿ ಗಾಯಗೊಂಡ ಮನೋಜ್ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯಿಂದಾಗಿ ಮನೋಜ್ ಅವರ ಎಡ ಕೆನ್ನೆಗೆ, ಎಡಕೈ ಮಣಿಗಂಟಿನ ಬಳಿ, ಬಲಕೈ ಮಣಿಗಂಟಿನ ಬಳಿ, ಎಡಕೈ ಕಿರುಬೆರಳಿಗೆ ಹಾಗೂ ಎಡಕೈ ರಟ್ಟೆಗೆ ಗಾಯಗಳಾಗಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮನೋಜ್ ಅವರು ವಿದೇಶದಲ್ಲಿ ಸಿವಿಲ್ ಇಂಜಿನಿಯರಿಂಗ್ ಉದ್ಯೋಗದಲ್ಲಿದ್ದು ಎರಡು ವಾರಗಳ ಹಿಂದೆಯಷ್ಟೆ ಊರಿಗೆ ಬಂದಿದ್ದರು ಎನ್ನಲಾಗಿದೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಎಫ್.ಐ.ಆರ್. ಸಂಖ್ಯೆ 40/2021 ರಂತೆ ಕಲಂ 324, 307 ಜೊತೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಘಟನೆ ವೈಯುಕ್ತಿಕ ದ್ವೇಷದಿಂದ ನಡೆದಿದೆಯೋ ಅಥವಾ ಇನ್ಯಾವುದೇ ಕಾರಣಗಳಿದೆಯೇ ಎಂಬುದು ಪೆÇಲೀಸ್ ತನಿಖೆಯಿಂದಷ್ಟೆ ತಿಳಿದು ಬರಬೇಕಿದೆ.
0 comments:
Post a Comment