ಪ್ರತೀ ದಿನ ಕಠಿಣ ಮಾರ್ಗಸೂಚಿ, ಮರುದಿನ ಸಡಿಲಿಕೆ : ನಿಯಮ ಪಾಲಿಸದ ಸಚಿವರು, ಅಧಿಕಾರಿಗಳು, ಜನರಿಗೆ ಮಾತ್ರ ದಂಡದ ಹೊರೆ
ಬೆಂಗಳೂರು, ಎಪ್ರಿಲ್ 04, 2021 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಕೋವಿಡ್ ಸೋಂಕು ನಿಯಂತ್ರಣ ಉದ್ದೇಶದಿಂದ ವ್ಯಾಯಾಮ ಶಾಲೆ-ಜಿಮ್‍ಗಳನ್ನು ಬಂದ್ ಮಾಡಿದ್ದ ರಾಜ್ಯ ಸರಕಾರ ಇದೀಗ ತನ್ನ ಆದೇಶದಲ್ಲಿ ಮಾರ್ಪಾಟು ಮಾಡಿಕೊಂಡಿದ್ದು, ಪರಿಷ್ಕøತ ಆದೇಶವನ್ನು ಮತ್ತೆ ಜಾರಿಗೊಳಿಸಿದೆ. ಶೇ 50 ರಷ್ಟು ಸಾಮಾರ್ಥ್ಯದೊಂದಿಗೆ ಜಿಮ್‍ಗಳ ಕಾರ್ಯನಿರ್ವಹಣೆಗೆ ಹೊಸ ಮಾರ್ಗಸೂಚಿಯಲ್ಲಿ ಅನುಮತಿಸಲಾಗಿದೆ.
ಈಗಾಗಲೇ ಚಿತ್ರ ರಂಗದ ಮಹನೀಯರ ಮನವಿಗೆ ಸ್ಪಂದಿಸಿ ಸಿನಿಮಾ ಥಿಯೇಟರ್ ಗಳಲ್ಲಿ ಹೌಸ್ ಫುಲ್ ಕಾರ್ಯಾಚರಣೆಗೆ ಅವಕಾಶ ನೀಡಿದ ಸರಕಾರ ಇದೀಗ ಜಿಮ್ ಮಾಲಿಕರ ಸಂಘದ ಎಚ್ಚರಿಕೆಗೂ ಮಣೆ ಹಾಕಿದೆ. ಸಿನಿಮಾ ಮಂದಿರಗಳ ಮಾದರಿಯಲ್ಲಿ ಜಿಮ್ ಗಳಿಗೂ ಸರಕಾರ ಅವಕಾಶ ನೀಡಿ ಮರು ಆದೇಶ ಹೊರಡಿಸಿದೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಧ್ಯಕ್ಷರೂ ಆದ ಮುಖ್ಯ ಕಾರ್ಯದರ್ಶಿ ಪಿ. ರವಿ ಕುಮಾರ್ ಈ ಕುರಿತು ಪರಿಷ್ಕøತ ಆದೇಶ ಹೊರಡಿಸಿದ್ದಾರೆ.
ಪರಿಷ್ಕøತ ಮಾರ್ಗಸೂಚಿ ಪ್ರಕಾರ ಜಿಮ್ ಗಳಲ್ಲಿ ಶೇ. 50ಕ್ಕಿಂತ ಹೆಚ್ಚು ಸಾಮರ್ಥ್ಯವಿಲ್ಲದಂತೆ ನೋಡಿಕೊಳ್ಳಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್ ಧರಿಸುವ ಜತೆಗೆ ಸೋಂಕು ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಆದೇಶಿಸಲಾಗಿದೆ. ವ್ಯಾಯಾಮ ಶಾಲೆಯ ಪರಿಕರಗಳನ್ನು ಬಳಸಿದ ನಂತರ ಪ್ರತಿ ಬಾರಿ ಸ್ಯಾನಿಟೈಸ್ ಮಾಡಬೇಕು. ಸರಕಾರದ ನಿಯಮ ಉಲ್ಲಂಘಿಸಿದರೆ ಜಿಮ್ ಗಳನ್ನು ಬಂದ್ ಮಾಡುವುದಾಗಿಯೂ ಮುಖ್ಯ ಕಾರ್ಯದರ್ಶಿ ಇದೇ ವೇಳೆ ಎಚ್ಚರಿಕೆ ನೀಡಿದ್ದಾರೆ.
ಸೋಂಕು ನಿಯಂತ್ರಣ ಉದ್ದೇಶದಿಂದ ರಾಜ್ಯದಲ್ಲಿ ಜಿಮ್ ಗಳನ್ನು ಬಂದ್ ಮಾಡುವ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ರಾಜ್ಯ ಜಿಮ್ ಮಾಲೀಕರ ಸಂಘ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ ಜಿಮ್ ಗಳ ಕಾರ್ಯನಿರ್ವಹಣೆಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿಕೊಂಡಿತ್ತು. ಮನವಿ ಪರಿಶೀಲಿಸಿದ ಸರಕಾರ ಇದೀಗ ತನ್ನ ಆದೇಶವನ್ನು ಪರಿಷ್ಕರಿಸಿದೆ.
ಒಟ್ಟಿನಲ್ಲಿ ಸರಕಾರ ಕೋವಿಡ್ ಕಟ್ಟೆಚ್ಚರಗಳನ್ನು ತನಗೆ ಬೇಕಾದಂತೆ ಮರು ಪರಿಶೀಲನೆ, ಪರಿಷ್ಕರಣೆ ಮಾಡುತ್ತಿರುವ ರೀತಿ ನೋಡಿದರೆ, ಕೊರೋನಾ ವೈರಸ್ ಸರಕಾರದ ಅನತಿ ಮೇರೆಗೆ ಕಾರ್ಯನಿರ್ವಹಿಸುತ್ತಿದೆಯೇನೋ ಅನಿಸುತ್ತಿದೆ ಎಂದು ವಿರೋಧ ಪಕ್ಷಗಳ ಟೀಕೆಗೆ ಬಲ ಬಂದಂತಾಗಿದೆ. ದಿನಕ್ಕೊಂದು ಕಠಿಣ ನಿಯಮ ಜಾರಿಗೊಳಿಸುವ ಸರಕಾರ ಮರುದಿನ ನಿಯಮ ಸಡಿಲಿಕೆಯನ್ನೂ ಘೋಷಿಸುತ್ತಿದೆ. ಮಾಸ್ಕ್, ಸಾಮಾಜಿಕ ಅಂತರ ಕೇವಲ ಆದೇಶದಲ್ಲಿ ಮಾತ್ರ ಉಳಿದುಕೊಂಡಿದೆ. ಸ್ವತಃ ಸರಕಾರದ ಭಾಗವಾಗಿರುವ ಸಚಿವರು, ಶಾಸಕರು, ಸರಕಾರಿ ಅಧಿಕಾರಿಗಳೇ ಇವುಗಳನ್ನು ಪಾಲಿಸುವುದು ಕಂಡು ಬರುತ್ತಿಲ್ಲ. ಜನ ಸಾಮಾನ್ಯರಿಗೆ ಮಾತ್ರ ನಿಯಮ ವಿಧಿಸಿ ಬೇಕಾಬಿಟ್ಟಿ ದಂಡ ವಸೂಲಿ ಮಾಡುವ ನಿಯಮ ಜಾರಿಯಲ್ಲಿರುವುದು ಸರಕಾರ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
0 comments:
Post a Comment