ಅಖಿಲ ಭಾರತ ಬ್ಯಾರಿ ಪರಿಷತ್ ವತಿಯಿಂದ ಬ್ಯಾರಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ
ಮಂಗಳೂರು, ಎಪ್ರಿಲ್ 10, 2021 (ಕರಾವಳಿ ಟೈಮ್ಸ್) : ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗೇರಿರುವ ಅಲ್ಪಸಂಖ್ಯಾತ-ಹಿಂದುಳಿದ ವರ್ಗಗಳ ವ್ಯಕ್ತಿಗಳು ತಮ್ಮ ಜವಾಬ್ದಾರಿಯ ಅವಧಿಯಲ್ಲಿ ಸರ್ವ ಜನಾಂಗದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸುವುದರ ಜೊತೆಗೆ ತಾವು ಪ್ರತಿನಿಧಿಸಿ ಬಂದಿರುವ ಅಲ್ಪಸಂಖ್ಯಾತ-ಹಿಂದುಳಿದ ವರ್ಗಗಳ ಅಭಿವೃದ್ದಿಯ ನಿಟ್ಟಿನಲ್ಲಿ ಹೆಚ್ಚುವರಿ ಮುತುವರ್ಜಿ ವಹಿಸಿ ಕಾರ್ಯಪ್ರವೃತ್ತರಾಗುವಂತೆ ಕರ್ನಾಟಕ ಸರಕಾರದ ಅಲ್ಪಸಂಖ್ಯಾತ ಆಯೋಗದ ಕಾರ್ಯದರ್ಶಿ ಹಾಗೂ ಮುಖ್ಯ ಕಾರ್ಯನಿರ್ವಾಹಕ ಮುಹಮ್ಮದ್ ನಝೀರ್ ಕರೆ ನೀಡಿದರು.
ಅಖಿಲ ಭಾರತ ಬ್ಯಾರಿ ಪರಿಷತ್ ವತಿಯಿಂದ ಮಂಗಳೂರು-ಬಾವುಟಗುಡ್ಡೆಯ ಹೋಟೆಲ್ ರೋಯಲ್ ಬ್ರಿಗೇಡ್ (ನಲಪಾಡ್) ಸಭಾಂಗಣದಲ್ಲಿ ಶನಿವಾರ ನಡೆದ ದ.ಕ. ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಬ್ಯಾರಿ ಅಧ್ಯಕ್ಷ-ಉಪಾಧ್ಯಕ್ಷರು ಹಾಗೂ ಬ್ಯಾರಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರಕಾರ ಬಜೆಟ್‍ನಲ್ಲಿ ಕಾದಿರಿಸಿರುವ ಅನುದಾನದ ಕೊರತೆಯಿಂದಾಗಿ ಈ ಬಾರಿ ಅಲ್ಪಸಂಖ್ಯಾತ ವರ್ಗಗಳಿಗೆ ಸರಕಾರದಿಂದ ದೊರೆಯುವ ವಿವಿಧ ಸವಲತ್ತುಗಳು ಕುಂಠಿತಗೊಂಡಿದೆ. ಈ ಕುಂಠಿತದಿಂದಾಗಿ ಅತೀ ಹೆಚ್ಚಿನ ತೊಂದರೆ ಅನುಭವಿಸಿದವರು ವಿದ್ಯಾರ್ಥಿಗಳು. ಈಗಾಗಲೆ ನಡೆಸಿರುವ ಪ್ರಗತಿ ಪರಿಶೀಲನೆ ಪ್ರಕಾರ ಕೇವಲ ಅರಿವು ಯೋಜನೆಯೊಂದರಲ್ಲೇ ಸವಲತ್ತು ಒದಗಿಸಲು ಸುಮಾರು 180 ಕೋಟಿ ರೂಪಾಯಿಗಳ ಅಗತ್ಯವಿದೆ. ಆದರೆ ಸರಕಾರದಿಂದ ಮಂಜೂರಾಗಿರುವುದು ಕೇವಲ 20 ಕೋಟಿ ರೂಪಾಯಿ ಮಾತ್ರ. ಹೀಗಿರುತ್ತಾ ಬೇರೆ ಬೇರೆ ಯೋಜನೆಗಳ ಅನುದಾನದಿಂದ ಹೊಂದಾಣಿಕೆ ಮಾಡಿಕೊಂಡು ನಿಭಾಯಿಸುವ ಬಗ್ಗೆ ಈಗಾಗಲೇ ಸರಕಾರ ಚಿಂತನೆ ನಡೆಸಿದೆ. ಮುಂದಿನ ದಿನಗಳಲ್ಲಿ ಹೆಚ್ಚುವರಿ ಅನುದಾನ ಸರಕಾರ ನೀಡಿದರೆ ಎಲ್ಲವೂ ಸರಿ ಹೋಗುವ ಸಾಧ್ಯತೆ ಇದೆ ಎಂದರು.
ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಮಾಜಿ ಸಚಿವ ಬಿ ರಮಾನಾಥ ರೈ, ಧರ್ಮ, ಧಾರ್ಮಿಕ ಸಿದ್ದಾಂತಗಳು ಸಮಾಜದ ಶಾಂತಿ-ಸೌಹಾರ್ದತೆಗೆ ಪೂರಕವಾಗಬೇಕೇ ಹೊರತು ಮಾರಕವಾಗಬಾರದು. ತಮ್ಮ ಧರ್ಮದ ಚೌಕಟ್ಟಿನಲ್ಲಿ ನಡೆಯುವುದರ ಜೊತೆಗೆ ಸಹೋದರ ಧರ್ಮೀಯರನ್ನು ಗೌರವಿಸಿದಾಗ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದರು. ವ್ಯಕ್ತಿ ತಾನು ಪರಿಪೂರ್ಣನಾದರೆ ಮಾತ್ರ ಇನ್ನೊಬ್ಬರನ್ನು ವಿಮರ್ಶಿಸುವ ನೈತಿಕತೆ ಪಡೆಯಬಲ್ಲ. ಅದು ಬಿಟ್ಟು ತನ್ನ ಹುಳುಕುಗಳನ್ನು ಬಚ್ಚಿಟ್ಟುಕೊಂಡು ಇನ್ನೊಬ್ಬರ ಬಗ್ಗೆ ವಿಮರ್ಶಿಸುವುದು ಸಮಂಜಸವಲ್ಲ ಎಂದವರು ಅಭಿಪ್ರಾಯಪಟ್ಟರು. ಸರಕಾರಗಳು ಬದಲಾಗಬಹುದು. ಸಮುದಾಯಗಳಿಗೆ ಬರುವ ಅನುದಾನಗಳಲ್ಲಿ ಏರುಪೇರಾಗಬಹುದು. ಈ ಹಂತದಲ್ಲಿ ಸಮುದಾಯದ ಸಂಘ-ಸಂಸ್ಥೆಗಳು ಸರಕಾರದ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸುವ ಕಾರ್ಯವನ್ನು ನೆರವೇರಿಸಬೇಕಾಗಿದೆ ಎಂದು ಸಲಹೆ ನೀಡಿದರು.
ಪರಿಷತ್ ಅಧ್ಯಕ್ಷ ಹಾಜಿ ಕೆ.ಎಸ್. ಅಬೂಬಕ್ಕರ್ ಪಲ್ಲಮಜಲು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಸ್.ಡಿ.ಪಿ.ಐ. ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ಸೆಂಟರ್ ಫಾರ್ ಡೆವಲಪ್‍ಮೆಂಟ್ ಸ್ಟಡೀಸ್ ಆಂಡ್ ಎಜ್ಯುಕೇಶನ್ ಮಂಗಳೂರು ಇದರ ನಿರ್ದೇಶಕಿ ಡಾ ರೀಟಾ ನೊರೊನ್ಹಾ, ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಸಂಚಾಲಕಿ ರೇಶ್ಮಾ ಇಬ್ರಾಹಿಂ, ಉದ್ಯಮಿ ಡಾ ಮುನೀರ್ ಬಾವಾ ಮೊದಲಾದವರು ಭಾಗವಹಿಸಿದ್ದರು.
ಸಂಸ್ಥೆಯ ಸ್ಥಾಪಕಾಧ್ಯಕ್ಷ ಜೆ ಹುಸೈನ್, ನಿಕಟಪೂರ್ವಾಧ್ಯಕ್ಷ ಬಿ ಎ ಮುಹಮ್ಮದ್ ಹನೀಫ್, ಸಲಹೆಗಾರ ಮುಹಮ್ಮದ್ ಕುಂಜತಬೈಲ್, ಕಾರ್ಯದರ್ಶಿಗಳಾದ ಎನ್.ಇ. ಮುಹಮ್ಮದ್, ಇಬ್ರಾಹಿಂ ನಡುಪದವು, ಸಂಘಟನಾ ಕಾರ್ಯದರ್ಶಿ ಸಿದ್ದೀಕ್ ಫರಂಗಿಪೇಟೆ ಮೊದಲಾದವರು ಉಪಸ್ಥಿತರಿದ್ದರು.
ಇದೇ ವೇಳೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಬ್ಯಾರಿ ಅಧ್ಯಕ್ಷರು-ಉಪಾಧ್ಯಕ್ಷರು ಹಾಗೂ ಬ್ಯಾರಿ ಸಾಧಕರಾದ ಸರಕಾರಿ ಉನ್ನತ ಹುದ್ದೆಯಲ್ಲಿರುವ ಮುಹಮ್ಮದ್ ನಝೀರ್, ಪೊಲೀಸ್ ಇಲಾಖೆಯಲ್ಲಿ ಮುಖ್ಯಮಂತ್ರಿ ಪದಕ ಪುರಸ್ಕøತ ಅಬ್ದುಲ್ ಜಬ್ಬಾರ್ ಕೊಳಕೆ, ಸಮಾಜ ಸೇವೆಗಾಗಿ ಡಾ ಕೆ ಎ ಮುನೀರ್ ಬಾವಾ, ಡಾ ಸಂಶಾದ್ ಕುಂಜತಬೈಲ್, ಚಾರ್ಟರ್ಡ್ ಅಕೌಟೆಂಟ್‍ಗಳಾದ ಆಯಿಷಾ ಎಂ., ಹಸೀನಾ, ತಾಬಿಶ್ ಹಸನ್, ಪಿ.ಎಚ್.ಡಿ. ಪದವಿ ಪಡೆದ ನಿಯಾಝ್ ಪಣಕಜೆ, ಅಂತರಾಷ್ಟ್ರೀಯ ಕ್ರೀಡಾಪಟು ಎಂ.ಸಿ. ಅಬ್ದುಲ್ ರಹಿಮಾನ್ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನಿತರ ಪರವಾಗಿ ಬಂಟ್ವಾಳ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ, ಉಳ್ಳಾಲ ನಗರಸಭಾ ಉಪಾಧ್ಯಕ್ಷ ಅಯ್ಯೂಬ್ ಮಂಚಿಲ, ಪುದು ಗ್ರಾ ಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಸಿಎ ಆಯಿಷಾ ಎಂ ಮಾತನಾಡಿದರು.
ಪರಿಷತ್ ಅಧ್ಯಕ್ಷ ಹಾಜಿ ಕೆ.ಎಸ್. ಅಬೂಬಕ್ಕರ್ ಸ್ವಾಗತಿಸಿ, ಗೌರವಾಧ್ಯಕ್ಷ ಯೂಸುಫ್ ವಕ್ತಾರ್ ಪ್ರಸ್ತಾವನೆಗೈದರು. ಕೋಶಾಧಿಕಾರಿ ನಿಸಾರ್ ಫಕೀರ್ ಮುಹಮ್ಮದ್ ವಂದಿಸಿದರು. ಮಾಸ್ಟರ್ ಝುಹೈರ್ ಕಿರಾಅತ್ ಪಠಿಸಿದರು. ಕಾರ್ಯದರ್ಶಿ ಅಬ್ದುಲ್ ಅಝೀಝ್ ಹಕ್ ಕಾರ್ಯನಿರ್ವಹಿಸಿದರು. ಹಸನಬ್ಬ ಮೂಡಬಿದ್ರೆ ಹಾಗೂ ಇಬ್ರಾಹಿಂ ಬಾತಿಷಾ ಪುತ್ತೂರು ಬ್ಯಾರಿ ಹಾಡು ಹಾಡಿದರು.
0 comments:
Post a Comment