ಬೆಂಗಳೂರು, ಎಪ್ರಿಲ್ 20, 2021 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಕೊರೋನಾ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ 1 ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲೂ ವಾರ್ಷಿಕ ಪರೀಕ್ಷೆ ನಡೆಸದೆ ಫಲಿತಾಂಶ ಘೋಷಿಸಲು ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ.
1 ರಿಂದ 9ನೇ ತರಗತಿಯ ಮಕ್ಕಳನ್ನು ಅವರ ನಿರಂತರ ಮತ್ತು ಸಮಗ್ರ ಮೌಲ್ಯಮಾಪನ ಆಧಾರದ ಮೇಲೆ ಮುಂದಿನ ತರಗತಿಗಳಿಗೆ ಉತ್ತೀರ್ಣ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ.
ಶಾಲೆಗಳು ತಮ್ಮ ಫಲಿತಾಂಶ ಪ್ರಕ್ರಿಯೆಯನ್ನು ಎಪ್ರಿಲ್ 30ರೊಳಗೆ ಪೂರ್ಣಗೊಳಿಸಲು ಅವಕಾಶ ನೀಡಲಾಗಿದೆ. ಮೇ 1 ರಿಂದ ಬೇಸಿಗೆ ರಜೆ ಪ್ರಾರಂಭವಾಗುತ್ತದೆ ಎಂದು ಸಚಿವರು ಹೇಳಿದ್ದಾರೆ. ಮಕ್ಕಳ ಕಲಿಕೆಯ ಸಾಮರ್ಥ್ಯವನ್ನು ನಿರ್ಣಯಿಸಲು ಮಾತ್ರ ಮೌಲ್ಯಮಾಪನ ಮತ್ತು ಫಲಿತಾಂಶ ಒಂದು ಸಾಧನವಾಗಿರಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖಾ ಆಯುಕ್ತ ಅನ್ಬು ಕುಮಾರ್ ತಿಳಿಸಿದ್ದಾರೆ.
ಜೂನ್ 21 ರಿಂದ ಜುಲೈ 5 ರವರೆಗೆ ವೇಳಾಪಟ್ಟಿಯ ಪ್ರಕಾರ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಇದೇ ವೇಳೆ ಶಿಕ್ಷಣ ಇಲಾಖೆ ಸುತ್ತೋಲೆ ತಿಳಿಸಿದೆ. ಜುಲೈ 15 ರಿಂದ 2021-22ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದೆ. 1 ರಿಂದ 8ನೇ ತರಗತಿಯ ಮಕ್ಕಳಿಗೆ (7 ಮತ್ತು 8 ನೇ ತರಗತಿ ಹೊಂದಿರುವ ಪ್ರಾಥಮಿಕ ಶಾಲೆಗಳಿಗೆ) ಮೇ 1 ರಿಂದ ಜೂನ್ 14 ರವರೆಗೆ ಬೇಸಿಗೆ ರಜೆ ಇರುತ್ತದೆ. ಅವರ ಮುಂದಿನ ಶೈಕ್ಷಣಿಕ ವರ್ಷ ಜೂನ್ 15 ರಿಂದ ಪ್ರಾರಂಭವಾಗಲಿದೆ.
8 ಮತ್ತು 9ನೇ ತರಗತಿಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮೇ 1 ರಿಂದ ಜುಲೈ 15 ರವರೆಗೆ ಬೇಸಿಗೆ ರಜೆ ಇರುತ್ತದೆ. ಪ್ರೌಢ ಶಾಲಾ ಶಿಕ್ಷಕರಿಗೆ ಜೂನ್ 15 ರಿಂದ ಜುಲೈ 14 ರವರೆಗೆ ಬೇಸಿಗೆ ರಜೆ ನೀಡಲಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
Sarkara parikshe raddu madidaru school galalli pariksheyannu munduvarisuttiddare.
ReplyDelete