ಮುಂಬೈ, ಮಾ. 31, 2021 (ಕರಾವಳಿ ಟೈಮ್ಸ್) : ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸರಣಿಯಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದ್ದ ಅಂಪೈರ್ ಸಾಫ್ಟ್ ಸಿಗ್ನಲ್ ನಿಯಮವನ್ನು ಈ ಬಾರಿಯ ಐಪಿಎಲ್ ಟೂರ್ನಿಯಿಂದ ತೆಗೆದು ಹಾಕಿರುವುದಾಗಿ ಬಿಸಿಸಿಐ ಘೋಷಿಸಿಕೊಂಡಿದೆ.
ಪ್ರವಾಸಿ ಇಂಗ್ಲೆಂಡ್ ವಿರುದ್ಧದ 4ನೇ ಟಿ-20 ಪಂದ್ಯದಲ್ಲಿ ಅಂಪೈರ್ ಸಾಫ್ಟ್ ಸಿಗ್ನಲ್ ನಿಯಮದ ಪ್ರಕಾರ ಟೀಂ ಇಂಡಿಯಾ ಬ್ಯಾಟ್ಸ್ ಮೆನ್ ಸೂರ್ಯಕುಮಾರ್ ಯಾದವ್ ಅವರಿಗೆ ಔಟ್ ನೀಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಈ ನಿರ್ಧಾರವನ್ನು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಪ್ರಶ್ನಿಸಿ ಅಸಮಾಧಾನ ಕೂಡಾ ವ್ಯಕ್ತಪಡಿಸಿದ್ದರು.
ಸಾಫ್ಟ್ ಸಿಗ್ನಲ್ ಕುರಿತು ವಿವಾದ ಕೇಳಿ ಬರುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಬಿಸಿಸಿಐ ಈ ಬಾರಿ ನಡೆಯಲಿರುವ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಈ ನಿಯಮವನ್ನು ರದ್ದು ಮಾಡಿದೆ. ಈ ಕುರಿತು ಬಿಸಿಸಿಐ ಉನ್ನತ ಮೂಲಗಳು ತಿಳಿಸಿರುವ ಪ್ರಕಾರ, ಈ ಬಾರಿಯ ಐಪಿಎಲ್‍ನಲ್ಲಿ ಸಾಫ್ಟ್ ಸಿಗ್ನಲ್ ನಿಯಮವನ್ನು ತೆಗೆದು ಹಾಕಲಾಗಿದ್ದು, ಪಂದ್ಯದ ವೇಳೆ ಮೈದಾನದಲ್ಲಿ ಕಾರ್ಯನಿರ್ವಹಿಸುವ ಅಂಪೈರ್ ಯಾವುದೇ ನಿರ್ಧಾರದ ಕುರಿತು ಗೊಂದಲಗಳಿದ್ದರೆ ಮೂರನೇ ಅಂಪೈರ್ ಜೊತೆ ಚರ್ಚಿಸಿ ನಂತರ ತನ್ನ ನಿರ್ಧಾರ ಪ್ರಕಟಿಸಬಹುದೆಂದು ತಿಳಿಸಿದೆ.
ಅಷ್ಟಕ್ಕೂ ಸಾಫ್ಟ್ ಸಿಗ್ನಲ್ ಎಂದರೆ ಏನು ಎಂಬುದು ಬಹು ಚರ್ಚಿತ ವಿಷಯ. ಸಾಫ್ಟ್ ಸಿಗ್ನಲ್ ಎಂದರೆ ಮೈದಾನದ ಅಂಪೈರ್ ಅನುಮಾನಾಸ್ಪದವಾದ ಕ್ಯಾಚ್ ಅಥವಾ ಇತರ ಔಟ್ ನಿರ್ಧಾರ, ರನ್‍ಗಳ ನಿರ್ಧಾರವನ್ನು ತೆಗೆದುಕೊಳ್ಳಲು ಆಗದೆ ಇದ್ದಾಗ ಟಿವಿ ಅಂಪೈರ್ ಸಹಾಯವನ್ನು ಕೇಳುತ್ತಾರೆ. ಈ ವೇಳೆ ಟಿವಿ ಅಂಪೈರ್ ಮೈದಾನದ ಅಂಪೈರ್ ನಿರ್ಧಾರವನ್ನು ಕೇಳುತ್ತಾರೆ. ಆಗ ಮೈದಾನದ ಅಂಪೈರ್ ಔಟ್ ಅಥವಾ ನಾಟ್‍ಔಟ್ ಎಂಬ ನಿರ್ಧಾರ ಪ್ರಕಟಿಸುತ್ತಾರೆ, ಇದು ಸಾಫ್ಟ್ ಸಿಗ್ನಲ್. ನಂತರ ಟಿವಿ ಅಂಪೈರ್ ಮರು ಪರೀಕ್ಷಿಸಿ ಸಾಕ್ಷಿಗಳು ಸರಿಯಾಗಿ ಗೊತ್ತಾಗದೆ ಇದ್ದರೆ ಮೈದಾನದ ಅಂಪೈರ್ ನಿರ್ಧಾರವನ್ನೇ ಎತ್ತಿ ಹಿಡಿಯುತ್ತಾರೆ.
ಐಪಿಎಲ್‍ನಂತಹ ದೊಡ್ಡ ಟೂರ್ನಿಗಳಲ್ಲಿ ಫೀಲ್ಡ್ ಅಂಪೈರ್ ಗಳಿಂದ ಆಗುವಂತಹ ತಪ್ಪುಗಳಿಂದ ತಂಡಗಳಿಗೆ ಸೋಲು ಗೆಲುವಿನಲ್ಲಿ ಬಹುದೊಡ್ಡ ಹೊಡೆತ ಬಿಳುತ್ತದೆ. ಹಾಗಾಗಿ ಆನ್-ಫೀಲ್ಡ್ ಅಂಪೈರ್ ಕೊಡುವ ನಿರ್ಧಾರವನ್ನು ಮೂರನೇ ಅಂಪೈರ್ ರದ್ದು ಪಡಿಸುವ ನಿರ್ಧಾರವನ್ನು ಈ ಬಾರಿಯ ಐಪಿಎಲ್‍ನಲ್ಲಿ ಅಳವಡಿಸಿಕೊಳ್ಳಲು ಬಿಸಿಸಿಐ ನಿರ್ಧರಿಸಿದೆ.
ಕಳೆದ ಬಾರಿಯ ಐಪಿಎಲ್‍ನಲ್ಲಿ ಪಂಜಾಬ್ ಮತ್ತು ಡೆಲ್ಲಿ ತಂಡಗಳ ನಡುವಿನ ಪಂದ್ಯದಲ್ಲಿ ಅಂಪೈರ್ ನೀಡಿದ ಅಲ್ಪಾವಧಿ ನಿಯಮದಿಂದಾಗಿ ಎರಡು ತಂಡಗಳ ನಡುವೆ ಭಾರೀ ಚರ್ಚೆ ಉಂಟಾಗಿತ್ತು. ಪಂದ್ಯದ ಬಳಿಕ ಪಂಜಾಬ್ ತಂಡದ ಆಡಳಿತ ಮಂಡಳಿ, ಅಲ್ಪಾವಧಿ ನಿಯಮದ ವಿರುದ್ಧ ಐಪಿಎಲ್ ಆಡಳಿತ ಮಂಡಳಿಗೆ ದೂರು ನೀಡಿತ್ತು.
14ನೇ ಆವೃತ್ತಿಯ ಐಪಿಎಲ್ ಪಂದ್ಯಾಟಗಳು ಎಪ್ರಿಲ್ 9 ರಿಂದ ಮೇ 30ರ ವರೆಗೆ ಬೆಂಗಳೂರು, ಚೆನ್ನೈ, ದೆಹಲಿ, ಅಹಮದಾಬಾದ್, ಕೋಲ್ಕತ್ತಾ ಹಾಗೂ ಮುಂಬೈ ನಗರಗಳಲ್ಲಿ ನಡೆಯಲಿದೆ.
0 comments:
Post a Comment