ಕರ್ತವ್ಯನಿರತ ಮಹಿಳಾ ಸಿಬ್ಬಂದಿಗಳ ಜೊತೆ ಉಡಾಫೆ ವರ್ತಿಸಿದ ವಿಟ್ಲ ಆರೋಗ್ಯ ಕೇಂದ್ರದ ಗುಮಾಸ್ತನ ವಿರುದ್ದ ಡಿಎಚ್‍ಒಗೆ ದೂರು - Karavali Times ಕರ್ತವ್ಯನಿರತ ಮಹಿಳಾ ಸಿಬ್ಬಂದಿಗಳ ಜೊತೆ ಉಡಾಫೆ ವರ್ತಿಸಿದ ವಿಟ್ಲ ಆರೋಗ್ಯ ಕೇಂದ್ರದ ಗುಮಾಸ್ತನ ವಿರುದ್ದ ಡಿಎಚ್‍ಒಗೆ ದೂರು - Karavali Times

728x90

17 March 2021

ಕರ್ತವ್ಯನಿರತ ಮಹಿಳಾ ಸಿಬ್ಬಂದಿಗಳ ಜೊತೆ ಉಡಾಫೆ ವರ್ತಿಸಿದ ವಿಟ್ಲ ಆರೋಗ್ಯ ಕೇಂದ್ರದ ಗುಮಾಸ್ತನ ವಿರುದ್ದ ಡಿಎಚ್‍ಒಗೆ ದೂರು

 

ಬಂಟ್ವಾಳ, ಮಾ. 17, 2021 (ಕರಾವಳಿ ಟೈಮ್ಸ್) : ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರ್ತವ್ಯದಲ್ಲಿ ಬಂದಿದ್ದ ಶ್ರವಣ ತಪಾಸಣಾ ಶಿಬಿರದ ಮಹಿಳಾ ಸಿಬ್ಬಂದಿಗಳ ಜೊತೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಇಲ್ಲಿನ ಗುಮಾಸ್ತನ ವಿರುದ್ಧ ಜಿಲ್ಲಾ ಆರೋಗ್ಯಾಧಿಕಾರಿಗೆ ದೂರು ನೀಡಲಾಗಿದೆ. ವಿಟ್ಲ ಆರೋಗ್ಯ ಕೇಂದ್ರದಲ್ಲಿ ಕಳೆದ ಕೆಲ ವರ್ಷಗಳಿಂದ ಗುಮಾಸ್ತನಾಗಿರುವ ಫೌಲ್ ಮಸ್ಕರೇನಸ್ ಎಂಬವರೇ ಮಹಿಳಾ ಸಿಬ್ಬಂದಿಗಳೊಂದಿಗೆ ಅನಾಗರಿಕವಾಗಿ ವರ್ತಿಸಿದ ಗುಮಾಸ್ತ. 

ಆಸ್ಪತ್ರೆಯಲ್ಲಿ ನಡೆಯುತ್ತಿರುವ ಶ್ರವಣ ತಪಾಸಣಾ ಶಿಬಿರಕ್ಕಾಗಿ ದಕ್ಷಿಣ ಕನ್ನಡ ಎನ್.ಪಿ.ಪಿ.ಸಿ.ಡಿ. ಕಾರ್ಯಕ್ರಮದ ಸಿಬ್ಬಂದಿಗಳು ವಿಟ್ಲಕ್ಕೆ ಆಗಮಿಸಿದ್ದರು. ಮಹಿಳಾ ಸಿಬ್ಬಂದಿಗಳು ಬಂದ ಕೆಲ ಕ್ಷಣದಲ್ಲೇ ಗುಮಾಸ್ತ ಫೌಲ್ ಮಸ್ಕರೇನಸ್ ಉದ್ದಟತನದಿಂದ ವರ್ತಿಸುತ್ತಿದ್ದ. ಇದರಿಂದ ಸಿಬ್ಬಂದಿಗಳಾದ ಶೋಭಿತಾ ಮತ್ತು ಕಾವ್ಯಶ್ರೀ ಅವರನ್ನು ಪ್ರಶ್ನಿಸಿದ್ದರೆನ್ನಲಾಗಿದೆ. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಫೌಲ್, ಮಹಿಳಾ ಸಿಬ್ಬಂದಿಗಳನ್ನು ಮನಬಂದಂತೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಹೊರಹೋಗುವಂತೆ ತಾಕೀತು ಮಾಡಿದ್ದನೆನ್ನಲಾಗಿದೆ. ನಾವು ಕರ್ತವ್ಯದಲ್ಲಿ ಬಂದಿರುವುದಾಗಿಯೂ ಗುಮಾಸ್ತನಾಗಿರುವ ನಿಮಗೆ ನಮ್ಮನ್ನು ಹೊರಹೋಗುವಂತೆ ಹೇಳುವ ಅಧಿಕಾರವಿಲ್ಲ. ಸಂಸ್ಕಾರ ಹೀನರಂತೆ ವರ್ತಿಸಬೇಡಿ ಎಂದು ಸಿಬ್ಬಂದಿಗಳು ಎಚ್ಚರಿಸಿದ್ದರೂ ಈತ ಸರಿಯಾಗಿಲ್ಲ ಎಂದು ದೂರುದಾರ ಮಹಿಳಾ ಸಿಬ್ಬಂದಿಗಳು ಆರೋಪಿಸಿದ್ದಾರೆ. 

ಈ ಹಿಂದೆಯೂ ಈತ ಆಸ್ಪತ್ರೆಯ ಮಹಿಳಾ ಸಿಬ್ಬಂದಿಗಳ ಜೊತೆ, ವೈದ್ಯರ ಜೊತೆ ಹಾಗೂ ವಾಹನ ಚಾಲಕರ ಜೊತೆ ಇದೇ ರೀತಿ ವರ್ತಿಸಿದ್ದ ಕಾರಣಕ್ಕಾಗಿ ಮೂರು ಬಾರಿ ದೂರು ನೀಡಲಾಗಿತ್ತು ಎನ್ನಲಾಗಿದೆ. ಆದರೆ ಹಿರಿಯ ಅಧಿಕಾರಿಗಳು ಸೌಜನ್ಯದಿಂದ ವರ್ತಿಸುವಂತೆ ಹೇಳಿದ್ದಲ್ಲದೇ ಇದೇ ರೀತಿ ಮುಂದುವರಿದರೆ ವರ್ಗಾವಣೆ ಮಾಡುವ ಎಚ್ಚರಿಕೆ ನೀಡಿ ಪ್ರಕರಣವನ್ನು ಅಲ್ಲಿಗೇ ಮುಗಿಸಿದ್ದರು. ಈ ಮಧ್ಯೆ ರಾಜಕೀಯ ಪ್ರಭಾವ ಬಳಸಿ ಮತ್ತೆ ಅದೇ ಆಸ್ಪತ್ರೆಯಲ್ಲಿ ಈತ ಕೆಲಸದಲ್ಲಿ ಮುಂದುವರಿದಿದ್ದ ಎಂಬ ದೂರುಗಳೂ ಇವೆ. 

ಇದೀಗ ಮತ್ತೆ ಈತನ ವರ್ತನೆಯಿಂದ ನೊಂದುಕೊಂಡಿರುವ ಮಹಿಳಾ ಸಿಬ್ಬಂದಿಗಳಾದ ಶೋಭಿತಾ ಮತ್ತು ಕಾವ್ಯಶ್ರೀ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಯ ಮೂಲಕ ಜಿಲ್ಲಾ ಆರೋಗ್ಯಾಧಿಕಾರಿಗೆ ದೂರು ನೀಡಿದ್ದಾರೆ. 

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್‍ಒ) ರಾಮಚಂದ್ರ ಬಾಯರಿ ಅವರು, ಬುಧವಾರ ವಿಟ್ಲ ಸಮುದಾಯ ಆಸ್ಪತ್ರೆಗೆ ಕರ್ತವ್ಯದ ನಿಮಿತ್ತ ಆಗಮಿಸಿದ್ದ ಮೆಡಿಕಲ್ ಟೀಮ್ ಜೊತೆ  ಗುಮಾಸ್ತ ಘರ್ಷಣೆ ನಡೆಸಿದ ಬಗ್ಗೆ ದೂರು ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. 


  • Blogger Comments
  • Facebook Comments

0 comments:

Post a Comment

Item Reviewed: ಕರ್ತವ್ಯನಿರತ ಮಹಿಳಾ ಸಿಬ್ಬಂದಿಗಳ ಜೊತೆ ಉಡಾಫೆ ವರ್ತಿಸಿದ ವಿಟ್ಲ ಆರೋಗ್ಯ ಕೇಂದ್ರದ ಗುಮಾಸ್ತನ ವಿರುದ್ದ ಡಿಎಚ್‍ಒಗೆ ದೂರು Rating: 5 Reviewed By: karavali Times
Scroll to Top