ಬಂಟ್ವಾಳ, ಮಾ. 11, 2021 (ಕರಾವಳಿ ಟೈಮ್ಸ್) : ತಾಲೂಕಿನ ವಿಟ್ಲ ಸಮೀಪದ ಇಡ್ಕಿದು ಗ್ರಾಮದ ಮಿತ್ತೂರು ನಿವಾಸಿ ಹಂಝ ಎಂಬವರ ಮನೆಗೆ ನುಗ್ಗಿದ ಕಳ್ಳರು ಮನೆ ಮಂದಿ ಗಾಢ ನಿದ್ದೆಯಲ್ಲಿದ್ದ ಸಂದರ್ಭ ಮಹಿಳೆ ಮೈಮೇಲೆ ಧರಿಸಿದ್ದ 4 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ಎಗರಿಸಿ ಪರಾರಿಯಾಗಿದ್ದಾರೆ.
ಮನೆ ಮಂದಿ ಪುತ್ತೂರಿನ ಸಂಬಂಧಿಕರ ಮನೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ತೆರಳಿ ರಾತ್ರಿ ವೇಳೆ ವಾಪಾಸು ಬಂದು ಮಲಗಿದ್ದರು. ಮುಂಜಾನೆ 4 ಗಂಟೆಯ ವೇಳೆಗೆ ಹಂಝ ಅವರ ಪತ್ನಿ ಎಚ್ಚರಗೊಂಡಾಗ ಮನೆಯ ಹಿಂಬದಿ ಬಾಗಿಲು ತೆರೆದಿತ್ತು. ಮನೆಯ ಕೋಣೆಯಲ್ಲಿ ಮಲಗಿದ್ದ ಸಂಬಂಧಿ ಮಿಸ್ರಿಯಾಳು ಧರಿಸಿದ್ದ 14 ಗ್ರಾಂ ತೂಕದ ಚಿನ್ನದ ಬ್ರಾಸ್‍ಲೆಟ್, 10 ಗ್ರಾಂ ತೂಕದ ಚಿನ್ನದ ಬಳೆ, 22 ಗ್ರಾಂ ತೂಕದ ಚಿನ್ನದ ಕಾಲು ಚೈನು ಹಾಗೂ ತಹಸಿಯಾ ಭಾನು ಧರಿಸಿದ್ದ 16 ಗ್ರಾಂ ತೂಕದ ಚಿನ್ನದ ಬ್ರಾಸ್‍ಲೆಟ್ ಹಾಗೂ 25 ಗ್ರಾಂ ತೂಕದ ಚಿನ್ನದ ಕಾಲು ಚೈನು, ಹಾಗೂ ಮೈಮುನಾಳು ಧರಿಸಿದ್ದ ತಲಾ 10 ಗ್ರಾಂ ತೂಕದ ಎರಡು ಚಿನ್ನದ ಬಳೆಗಳನ್ನು ಕಳ್ಳರು ಕಳ್ಳತನ ನಡೆಸಿದ್ದಾರೆ. ಒಟ್ಟು 107 ಗ್ರಾಂ ಚಿನ್ನಾಭರಣಗಳು ಕಳ್ಳತನವಾಗಿದ್ದು, ಕಳ್ಳತನವಾಗಿರುವ ಸೊತ್ತುಗಳ ಮೌಲ್ಯ ಸುಮಾರು 4.32 ಲಕ್ಷ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ಎರಡು ದಿನಗಳ ಹಿಂದಷ್ಟೆ ವಿಟ್ಲ ಮುಡ್ನೂರು ಗ್ರಾಮದ ನೇರಳಕಟ್ಟೆಯಲ್ಲಿ ಇದೇ ರೀತಿ ಕಳ್ಳತನ ನಡೆದಿತ್ತು. ಕಳ್ಳರ ಕಾಟದಿಂದಾಗಿ ಜನ ಆತಂಕಗೊಂಡಿದ್ದಾರೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳರ ಭೇಟೆಗೆ ಬಲೆ ಬೀಸಿದ್ದಾರೆ.
0 comments:
Post a Comment