ಅಹಮದಾಬಾದ್, ಮಾ. 06, 2021 (ಕರಾವಳಿ ಟೈಮ್ಸ್) : ಭಾರತ ಹಾಗೂ ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯದ ಮೂರನೇ ದಿನ ಭಾರತೀಯ ಸ್ಪಿನ್ನರ್‍ಗಳಾದ ಅಕ್ಷರ್ ಪಟೇಲ್ ಹಾಗೂ ರವಿಚಂದ್ರನ್ ಅಶ್ವಿನ್ ಅವರ ಮಾರಕ ದಾಳಿಗೆ ಸಂಪೂರ್ಣವಾಗಿ ನೆಲಕಚ್ಚಿದ ಇಂಗ್ಲೆಂಡ್ ತಂಡ 135 ರನ್‍ಗಳಿಗೆ ಪತನಗೊಳ್ಳುವ ಮೂಲಕ ಟೀಂ ಇಂಡಿಯಾ ಇನ್ನಿಂಗ್ಸ್ ಹಾಗೂ 25 ರನ್‍ಗಳಿಂದ ಜಯಿಸಿಕೊಂಡಿದೆ. ಜಯದೊಂದಿಗೆ ಭಾರತ ಸರಣಿಯನ್ನು 3-1ರ ಅಂತರದಲ್ಲಿ ತನ್ನದಾಗಿಸಿಕೊಂಡಿದೆ.
3ನೇ ದಿನ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಸ್ಪಿನ್ನರುಗಳಾದ ಅಕ್ಷರ್ ಪಟೇಲ್ ಹಾಗೂ ಆರ್ ಅಶ್ವಿನ್ ಮರ್ಮಾತವಿಕ್ಕಿದರು. ಅಕ್ಷರ್ ಪಟೇಲ್ 5 ವಿಕೆಟ್ (24 ಓವರ್, 6 ಮೇಡನ್ ಓವರ್) ಪಡೆದರೆ, ಆರ್ ಅಶ್ವಿನ್ 5 ವಿಕೆಟ್ (22.5 ಓವರ್, 4 ಮೇಡನ್ ಓವರ್) ಗಳಿಸುವ ಮೂಲಕ ಆಂಗ್ಲರ ಹೆಡೆಮುರಿ ಕಟ್ಟಿದರು.
ಈ ಮೊದಲು ಎರಡನೇ ದಿನ 294 ರನ್‍ಗಳಿಗೆ 7 ವಿಕೆಟ್ ಕಳೆದುಕೊಂಡಿದ್ದ ಭಾರತ ಬ್ಯಾಟಿಂಗ್ ಮುಂದುವರಿಸಿ 365 ರನ್‍ಗಳಿಗೆ ಸರ್ವಪತನ ಕಂಡಿತು. ಭಾರತದ ಬ್ಯಾಟಿಂಗ್ ಸರದಿಯಲ್ಲಿ ಮಿಂಚಿದ ವಾಷಿಂಗ್ಟನ್ ಸುಂದರ್ 96 ರನ್ (174 ಎಸೆತ, 10 ಬೌಡಂರಿ, 1 ಸಿಕ್ಸರ್) ಸಿಡಿಸಿ ಅಜೇಯರಾಗಿ ಉಳಿದು ಶತಕ ವಂಚಿತರಾದರು.
ಭಾರತ ಇಂಗ್ಲೆಂಡ್ ವಿರುದ್ಧದ ಸರಣಿಯನ್ನು 3-1 ಅಂತರದಲ್ಲಿ ಜಯಿಸುವ ಮೂಲಕ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪ್ರವೇಶ ಪಡೆದುಕೊಂಡಿದೆ.
0 comments:
Post a Comment