ಅಹಮದಾಬಾದ್, ಮಾ. 21, 2021 (ಕರಾವಳಿ ಟೈಮ್ಸ್) : ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ಶನಿವಾರ ನಡೆದ ಫೈನಲ್ ಮಹತ್ವ ಪಡೆದಿದ್ದ ಕೊನೆಯ ಹಾಗೂ 5ನೇ ಟಿ-20 ಪಂದ್ಯವನ್ನು 36 ರನ್‍ಗಳಿಂದ ಭರ್ಜರಿಯಾಗಿ ಗೆಲ್ಲುವ ಮೂಲಕ ಪ್ರವಾಸಿ ಇಂಗ್ಲಂಡ್ ವಿರುದ್ದ 5 ಪಂದ್ಯಗಳ ಟಿ-20 ಸರಣಿಯನ್ನು 3-2 ಅಂತರದಿಂದ ಕೈವಶಪಡಿಸಿಕೊಂಡಿದೆ.
ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಹಗಲು ರಾತ್ರಿ ಪಂದ್ಯದಲ್ಲಿ ಟಾಸ್ ಜಯಿಸಿದ ಇಂಗ್ಲಂಡ್ ನಾಯಕ ಇಯಾನ್ ಮಾರ್ಗನ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸುವ ಅವಕಾಶ ಪಡೆದ ಭಾರತ ಮಾಡು ಇಲ್ಲವೇ ಮಡಿ ಎಂಬಂತಿದ್ದ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ನಾಯಕ ವಿರಾಟ್ ಕೊಹ್ಲಿ ಹಾಗೂ ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರು ಪಂದ್ಯವನ್ನು ಗೆದ್ದೇ ಗೆಲ್ಲುವೆವು ಎಂಬ ಹಠದಲ್ಲಿ ಸ್ಫೋಟಕ ಆರಂಭ ಮಾಡಿದರು.
ಕೊಹ್ಲಿ-ರೋಹಿತ್ ಅವರು ಮೊದಲ ವಿಕೆಟ್ ಜೊತಯಾಟದಲ್ಲಿ 94 ರನ್ ಗಳಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದರು. ಈ ಮೂಲಕ ಸತತ ಮೂರನೇ ಬಾರಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದ ಇಂಗ್ಲೆಂಡ್ ನಾಯಕ ಐಯಾನ್ ಮಾರ್ಗನ್ ಅವರ ಯೋಜನೆಯನ್ನು ತಲೆ ಕೆಳಗೆ ಮಾಡಿದರು.
ರೋಹಿತ್ ಶರ್ಮಾ ಕೇವಲ 34 ಎಸೆತಗಳ ಮುಂದೆ 64 ರನ್ (6 ಸಿಕ್ಸರ್, 4 ಬೌಂಡರಿ) ಭಾರಿಸಿ 8ನೇ ಓವರಿನ ಕೊನೆಯ ಎಸೆತದಲ್ಲಿ ಬೆನ್ ಸ್ಟೋಕ್ ಅವರಿಗೆ ಕ್ಲೀನ್ ಬೌಲ್ಡ್ ಆದರು. ನಾಯಕ ವಿರಾಟ್ ಕೊಹ್ಲಿ ಅಜೇಯ 80 ರನ್ (52 ಎಸೆತ, 2 ಸಿಕ್ಸರ್, 7 ಬೌಂಡರಿ) ಭಾರಿಸಿ ತಂಡದ ಮೊತ್ತವನ್ನು 200 ದಾಟಿಸುವಲ್ಲಿ ನೆರವಾದರು.
ನಾಯಕ ವಿರಾಟ್ ಕೊಹ್ಲಿ ಪಂದ್ಯದಲ್ಲಿ ಮೂರು ಉತ್ತಮ ಜೊತೆಯಾಟದಲ್ಲಿ ಭಾಗಿಯಾದರು. ರೋಹಿತ್ ಶರ್ಮಾ ಅವರೊಂದಿಗೆ 56 ಎಸೆತಗಳಲ್ಲಿ 94 ರನ್ ಜೊತೆಯಾಟವಾಡಿದರೆ, ಬಳಿಕ ಸೂರ್ಯಕುಮಾರ್ ಯಾದವ್ ಅವರೊಂದಿಗೆ 26 ಎಸೆತಗಳಲ್ಲಿ 49 ರನ್ ಭಾಗೀದಾರಿಕೆ ನಡೆಸಿದರು. ನಂತರ ಹಾರ್ದಿಕ್ ಪಾಂಡ್ಯ ಜೊತೆಗೂಡಿ 3ನೇ ವಿಕೆಟ್‍ಗೆ 40 ಎಸೆತಗಳಲ್ಲಿ 81 ರನ್ ಜೊತೆಯಾಟ ನಡೆಸಿದರು. ಸೂರ್ಯಕುಮಾರ್ ಯಾದವ್ 17 ಎಸೆತದಲ್ಲಿ 32 ರನ್ (2 ಸಿಕ್ಸರ್, 3 ಬೌಂಡರಿ) ಹಾಗೂ ಹಾರ್ದಿಕ್ ಪಾಂಡ್ಯ 17 ಎಸೆತದಲ್ಲಿ 39 ರನ್ (2 ಸಿಕ್ಸರ್, 4 ಬೌಂಡರಿ) ಸಿಡಿಸಿದರು.
ಈ ಮಧ್ಯೆ ವಿರಾಟ್ ಕೊಹ್ಲಿ ಟಿ-20 ಪಂದ್ಯದಲ್ಲಿ 12 ಅರ್ಧ ಶತಕಗಳನ್ನು ಸಿಡಿಸುವ ಮೂಲಕ ಈ ಸಾಧನೆ ಮಾಡಿದ ಪ್ರಥಮ ನಾಯಕ ಎಂಬ ಖ್ಯಾತಿಗೆ ಪಾತ್ರರಾದರು. ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸ್ 11 ಅರ್ಧ ಶತಕ ದಾಖಲಿಸಿ ನಂತರದ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ನಾಯಕ ಅರೋನ್ ಪಿಂಚ್ 10 ಅರ್ಧ ಶತಕ ದಾಖಲಿಸಿ ಮೂರನೇ ಸ್ಥಾನದಲ್ಲಿದ್ದಾರೆ.
ಪಂದ್ಯದಲ್ಲಿ ಕೇವಲ 15 ರನ್ ಬಿಟ್ಟು ಕೊಟ್ಟು 2 ವಿಕೆಟ್ ಪಡೆದ ಭುವನೇಶ್ವರ್ ಕುಮಾರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ, ನಾಯಕ ವಿರಾಟ್ ಕೊಹ್ಲಿ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಗೆಲುವಿಗೆ 225 ರನ್‍ಗಳ ಗುರಿಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಆರಂಭಿಕ ಆಘಾತ ನೀಡಿದ ಭುವನೇಶ್ವರ್ ಕುಮಾರ್ ಅವರ 2ನೇ ಎಸೆತದಲ್ಲಿ ಜೇಸನ್ ರಾಯ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಈ ಮೂಲಕ ರಾಯ್ ಡಕೌಟ್ ಆದರು. ಸ್ಫೋಟಕ ಬ್ಯಾಟಿಂಗ್ ನಡೆಸಿದ ಜೋಸ್ ಬಟ್ಲರ್ 52 ರನ್ (34 ಎಸೆತಗಳು, 4 ಸಿಕ್ಸರ್, 2 ಬೌಂಡರಿ) ಸಿಡಿಸಿ ಹಾರ್ದಿಕ್ ಪಾಂಡ್ಯಗೆ ಕ್ಯಾಚ್ ನೀಡಿದರು. ಬಳಿಕ ಜಾನಿ ಬೈರ್ಸ್ಟೋವ್ 7 ರನ್ (1 ಬೌಂಡರಿ) ಸಿಡಿಸಿ ಸೂರ್ಯಕುಮಾರ್ ಯಾದವ್‍ಗೆ ಕ್ಯಾಚ್ ನೀಡಿದರು. ಬಳಿಕ ಡೇವಿಡ್ ಮಲನ್ ಮಿಂಚಿನಾಟವಾಡಿ 46 ಎಸೆತಗಳಲ್ಲಿ 68 ರನ್ (2 ಸಿಕ್ಸರ್, 9 ಬೌಂಡರಿ) ಸಿಡಿಸಿ ಶಾರ್ದೂಲ್ ಠಾಕೂರ್ ಅವರಿಗೆ ಕ್ಲೀನ್ ಬೌಲ್ಡ್ ಆದರು. ಬಳಿಕ ನಾಯಕ ಇಯಾನ್ ಮಾರ್ಗನ್ ಕೇವಲ 1 ರನ್ ಗಳಿಸಿ ಇನ್ನಿಂಗ್ಸ್ ಮುಗಿಸಿದರು. ಬೆನ್ ಸ್ಟೋಕ್ಸ್ 12 ಎಸೆತಗಳಲ್ಲಿ 14 ರನ್ (2 ಬೌಂಡರಿ) ಬಾರಿಸಿ ಔಟಾದರು. ಅದೇ ಓವರಿನಲ್ಲಿ ಜೋಫ್ರಾ ಆರ್ಚರ್ ಕೇವಲ 1 ರನ್ ಭಾರಿಸಿ ರನೌಟ್ ಆಗಿ ನಿರ್ಗಮಿಸಿದರು. ಕೊನೆಯದಾಗಿ ಕ್ರಿಸ್ ಜಾರ್ಡನ್ 10 ಎಸೆತಗಳಲ್ಲಿ 11 ರನ್ (1 ಸಿಕ್ಸರ್) ಬಾರಿಸಿ ಔಟಾದರು.
0 comments:
Post a Comment