ನಾಗ್ಪುರ, ಮಾ. 11, 2021 (ಕರಾವಳಿ ಟೈಮ್ಸ್) : ಮಹಾರಾಷ್ಟ್ರದಲ್ಲಿ ಮಾರಕ ಕೊರೊನಾ ವೈರಸ್ ಮತ್ತೆ ಅಟ್ಟಹಾಸ ಮೆರೆದಿರುವ ಹಿನ್ನಲೆಯಲ್ಲಿ ಆತಂಕಕ್ಕೀಡಾಗಿರುವ ಮಹಾ ಸರಕಾರ ನಾಗ್ಪುರ ನಗರದಲ್ಲಿ ಮಾರ್ಚ್ 15 ರಿಂದ 21 ರವರೆಗೆ ಕಟ್ಟು ನಿಟ್ಟಿನ ಲಾಕ್‍ಡೌನ್ ಜಾರಿಗೊಳಿಸಿ ಆದೇಶಿಸಿದೆ.
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ನಿತಿನ್ ರಾವತ್ ಅವರು ಗುರುವಾರ ಅಧಿಕೃತ ಘೋಷಣೆ ಮಾಡಿದ್ದಾರೆ. ನಾಗ್ಪುರ ಜಿಲ್ಲೆಯಲ್ಲಿ ಕಳೆದೊಂದು ತಿಂಗಳಿನಿಂದ ದೈನಂದಿನ ಕೋವಿಡ್-19 ಪಾಸಿಟಿವ್ ಪ್ರಕರಣಗಳಲ್ಲಿ ಭಾರಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಲಾಕ್‍ಡೌನ್ ಜಾರಿಗೊಳಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಈ ಬಗ್ಗೆ ಗುರುವಾರ ಜಿಲ್ಲೆಯ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಚಿವ ರಾವತ್ ಮಾರ್ಚ್ 15 ರಿಂದ 21 ರವರೆಗೆ ನಾಗ್ಪುರ ಪೆÇಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಲಾಕ್‍ಡೌನ್ ಜಾರಿಗೊಳಿಸಲಾಗುವುದು ಎಂದಿದ್ದಾರೆ.
ಲಾಕ್‍ಡೌನ್ ಸಮಯದಲ್ಲಿ ಖಾಸಗಿ ಕಚೇರಿಗಳು ಬಂದ್ ಆಗಲಿವೆ, ಆದರೆ ಸರಕಾರಿ ಕಚೇರಿಗಳು ಶೇಕಡಾ 25 ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸುತ್ತವೆ ಎಂದ ಸಚಿವ ರಾವತ್ ಅಗತ್ಯ ವಸ್ತುಗಳ ಅಂಗಡಿಗಳು ಎಂದಿನಂತೆ ತೆರೆದಿರುತ್ತವೆ, ಲಾಕ್‍ಡೌನ್ ಅವಧಿಯಲ್ಲಿ ಮಾತ್ರ ಮದ್ಯವನ್ನು ಆನ್‍ಲೈನ್‍ನಲ್ಲಿ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಜನರು ಅನಗತ್ಯವಾಗಿ ಮನೆಯಿಂದ ಹೊರಗೆ ಬರಬಾರದು ಎಂದವರು ಮನವಿ ಮಾಡಿದ್ದಾರೆ.
ಕೊರೊನಾ ವ್ಯಾಕ್ಸಿನ್ ಮೊದಲ ಡೋಸ್ ತೆಗೆದುಕೊಂಡು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಬರುವ ದಿನಗಳಲ್ಲಿ ಕೆಲವು ಪ್ರದೇಶಗಳಲ್ಲಿ ಲಾಕ್‍ಡೌನ್ ವಿಧಿಸುವ ಅಗತ್ಯವಿದೆ. ಕೆಲವೇ ದಿನಗಳಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದರು.
ಮಹಾರಾಷ್ಟ್ರದಲ್ಲಿ ಒಂದೇ ದಿನ 13,659 ಕೊರೊನಾ ಪ್ರಕರಣಗಳು ವರದಿಯಾಗಿವೆ. ಕಳೆದ 15 ದಿನಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದ್ವಿಗುಣವಾಗಿದ್ದು, ಮಹಾರಾಷ್ಟ್ರದ ಜನತೆ ಆತಂಕದಲ್ಲಿದ್ದಾರೆ. 2020 ಅಕ್ಟೋಬರ್ 7 ರಂದು ಮಹಾರಾಷ್ಟ್ರದಲ್ಲಿ 14,578 ಕೊರೊನಾ ಪ್ರಕರಣಗಳು ಕಂಡು ಬಂದಿದ್ದವು. ಸದ್ಯ ಕಳೆದ 24 ಗಂಟೆಯಲ್ಲಿ 13 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದ್ದು, ದೇಶದ ಶೇ. 60ರಷ್ಟು ಪ್ರಕರಣಗಳು ವರದಿಯಾಗುತ್ತಿವೆ.
ದೇಶದಲ್ಲಿ ಬುಧವಾರ 22,854 ಜನರಿಗೆ ಸೋಂಕು ತಗುಲಿದ್ದು, 18,100 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಕಳೆದ 24 ಗಂಟೆಯಲ್ಲಿ 126 ಜನ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಇದುವರೆಗೂ 1,58,189 ಸೋಂಕಿತರು ಸಾವನ್ನಪ್ಪಿದ್ದಾರೆ. ಸದ್ಯ 1,89,226 ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
0 comments:
Post a Comment