ಮುಂಬೈ, ಮಾ. 08, 2021 (ಕರಾವಳಿ ಟೈಮ್ಸ್) : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿಯ ಕ್ರಿಕೆಟ್ ಪಂದ್ಯಾಟಗಳು ಎಪ್ರಿಲ್ 9 ರಿಂದ ಮೇ 30ರವರೆಗೆ ಭಾರತದಲ್ಲೇ ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸ್ಪಷ್ಟಪಡಿಸಿದೆ. ದೇಶದ 6 ಪ್ರಮುಖ ನಗರಗಳಲ್ಲಿ ಈ ಬಾರಿ ಪಂದ್ಯಾವಳಿ ನಡೆಯಲಿದೆ ಎಂದು ಬಿಸಿಸಿಐ ಹೇಳಿದೆ.
ಐಪಿಎಲ್ ಪಂದ್ಯಾಟಗಳಿಗಾಗಿ ಬೆಂಗಳೂರು, ಚೆನ್ನೈ, ದೆಹಲಿ, ಅಹಮದಾಬಾದ್, ಕೋಲ್ಕತ್ತಾ ಹಾಗೂ ಮುಂಬೈ ನಗರಗಳನ್ನು ಆಯ್ಕೆ ಮಾಡಲಾಗಿದೆ. ಏಪ್ರಿಲ್ 9 ರಿಂದ ಮೇ 30 ರವರೆಗೆ 56 ಲೀಗ್ ಹಂತದ ಪಂದ್ಯಾಟಗಳು ನಡೆಯಲಿದೆ ಎಂದು ಬಿಸಿಸಿಐ ತಿಳಿಸಿದೆ. ಉದ್ಘಾಟನಾ ಪಂದ್ಯದಲ್ಲಿ ಆರ್‍ಸಿಬಿ ಮತ್ತು ಮುಂಬೈ ಮಧ್ಯೆ ಸೆಣಸಾಟ ನಡೆಯಲಿದೆ.
ಈ ಬಾರಿಯ ಐಪಿಎಲ್ ಪಂದ್ಯಗಳ ಪ್ರಮುಖ ಅಂಶವೆಂದರೆ ತಟಸ್ಥ ಸ್ಥಳಗಳಲ್ಲೇ ಹೆಚ್ಚಿನ ಪಂದ್ಯ ನಡೆಯಲಿದ್ದು, ಎಲ್ಲಾ ತಂಡಗಳು ಲೀಗ್ ಹಂತದ ಪಂದ್ಯಗಳನ್ನು ತವರಿನಂಗಳದಲ್ಲಿ ಆಡದೆ ಬೇರೆ ಬೇರೆ ಅಂಕಣಗಳಲ್ಲಿ ಎದುರು ಬದುರಾಗಲಿದೆ.
14ನೇ ಆವೃತ್ತಿಯ ಐಪಿಎಲ್‍ನಲ್ಲಿ 11 ಡಬಲ್ ಹೆಡ್ಡರ್ ಪಂದ್ಯಾಟಗಳು ನಡೆಯಲಿದ್ದು, 6 ತಂಡಗಳು 3 ಮದ್ಯಾಹ್ನದ ನಂತರದ ಪಂದ್ಯಾಟಗಳನ್ನು ಆಡಿದರೆ, 2 ತಂಡಗಳು 2 ಮಧ್ಯಾಹ್ನದ ನಂತರದ ಪಂದ್ಯವನ್ನು ಆಡಲಿದೆ. ಮಧ್ಯಾಹ್ನದ ಪಂದ್ಯಾಟಗಳು ಭಾರತೀಯ ಕಾಲಮಾನ 3:30ಕ್ಕೆ ಆರಂಭಗೊಂಡರೆ, ರಾತ್ರಿಯ ಪಂದ್ಯಗಳು ಸಂಜೆ 7:30ಕ್ಕೆ ಪ್ರಾರಂಭವಾಗಲಿದೆ.
ಕಳೆದ ಬಾರಿ ಯುಎಇಯಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸಲಾಗಿತ್ತು. ಶಾರ್ಜಾ, ಅಬುಧಾಬಿ ಹಾಗೂ ದುಬೈ ಕ್ರೀಡಾಂಗಣಗಳಲ್ಲಿ ಐಪಿಎಲ್ ಪಂದ್ಯಗಳು ನಡೆದಿದ್ದವು. ಆದರೆ ಈ ಬಾರಿ ಭಾರತದ 6 ಸ್ಥಳಗಳಲ್ಲಿ ಪಂದ್ಯ ನಡೆಸಲು ಬಿಸಿಸಿಐ ತೀರ್ಮಾನಿಸಿದೆ. ಅಲ್ಲದೆ ಒಟ್ಟು 8 ತಂಡಗಳ ಆಟಗಾರರನ್ನು ಬಯೋ ಬಬಲ್‍ನಲ್ಲಿ ಇರಲಿದ್ದಾರೆ. ಇದರೊಂದಿಗೆ ಎಲ್ಲಾ 6 ಕ್ರೀಡಾಂಗಣಗಳಲ್ಲಿ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಕ್ರೀಡಾಂಗಣಗಳು ರಂಗೇರಲಿದೆ.
ಕಳೆದ ಬಾರಿ ಯುಎಇಯಲ್ಲಿ ನಡೆದ ಐಪಿಎಲ್ ಪಂದ್ಯಗಳಿಗೆ ಕೊರೋನಾ ವೈರಸ್ ಕಾರಣದಿಂದಾಗಿ ಅಭಿಮಾನಿಗಳಿಗೆ ಪ್ರವೇಶ ಕಲ್ಪಿಸಿರಲಿಲ್ಲ. ಐಪಿಎಲ್ 2021 ರ ಆವೃತ್ತಿಗೆ ಆಟಗಾರರ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನೇನು ಸಿದ್ಧತೆ ಮಾತ್ರ ಬಾಕಿ ಉಳಿದಿದೆ.
0 comments:
Post a Comment