ಬೆಂಗಳೂರು, ಮಾ. 12, 2021 (ಕರಾವಳಿ ಟೈಮ್ಸ್) : ರಾಜ್ಯ ಸರಕಾರದ ಆದೇಶ ಮೀರಿ 1 ರಿಂದ 5ನೇ ತರಗತಿ ಶಾಲಾ ಮಕ್ಕಳಿಗೆ ಕೆಲ ಖಾಸಗಿ ಶಾಲೆಗಳು ಬೋಧನೆ ನಡೆಸುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಸರಕಾರದ ಆದೇಶ ಮೀರುವ ಶಾಲೆಗಳ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ರಾಜ್ಯದ ಎಲ್ಲಾ ಜಿಲ್ಲಾ ಉಪನಿರ್ದೇಶಕರುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಮಕ್ಕಳ ಯೋಗಕ್ಷೇಮ ಗಮನದಲ್ಲಿಟ್ಟುಕೊಂಡು ಸರಕಾರ ಕೈಗೊಂಡಿರುವ ನಿರ್ಧಾರವನ್ನು ಮೀರಲು ಯಾರಿಗೂ ಅವಕಾಶವಿಲ್ಲ. ಅನುಮತಿ ಇಲ್ಲದಿದ್ದರೂ 1 ರಿಂದ 5ನೇ ತರಗತಿ ಮಕ್ಕಳನ್ನು ಶಾಲೆಗೆ ಕರೆಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಸಚಿವರು ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ ಎಂಬ ಮಾಹಿತಿ ಬಂದಿದೆ.
ಕೊರೋನಾ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಸರಕಾರ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 6 ರಿಂದ 10ನೇ ತರಗತಿವರೆಗಿನ ಶಾಲಾ ಮಕ್ಕಳಿಗೆ ಮಾತ್ರ ತರಗತಿ ಬೋಧನೆಗೆ ಅವಕಾಶ ನೀಡಿದೆ. ಆದರೆ, ಕೆಲ ಖಾಸಗಿ ಶಾಲೆಗಳು ಅನುಮತಿ ಇಲ್ಲದೆ 1 ರಿಂದ 5ನೇ ತರಗತಿ ಮಕ್ಕಳಿಗೂ ಶಾಲೆಗೆ ಹಾಜರಾಗುವಂತೆ ಸೂಚಿಸಿ ತರಗತಿ ನಡೆಸುತ್ತಿವೆ ಎಂಬ ಆರೋಪ ಕೇಳಿ ಬರುತ್ತಿದೆ. ಅಂತಹ ಶಾಲೆಗಳ ಪರವಾನಗಿ ರದ್ದುಪಡಿಸುವುದು ಸೇರಿದಂತೆ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ಮಾಡಿಕೊಂಡಿರುವ ಟ್ವೀಟ್ ಮನವಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ಸೂಚನೆ ನೀಡಿದ್ದಾರೆ.
ಸರಕಾರ ಯಾವುದೇ ನಿರ್ಧಾರ ಕೈಗೊಂಡರೂ ಅದರ ಹಿಂದೆ ಮಕ್ಕಳ ಹಿತ, ಯೋಗಕ್ಷೇಮ ಕುರಿತು ಚಿಂತನೆ ಇರುತ್ತದೆ. ಆರೋಗ್ಯ ಇಲಾಖೆಯ ಸಲಹೆಯಂತೆ 1 ರಿಂದ 5ನೇ ತರಗತಿ ಮಕ್ಕಳಿಗೆ ತರಗತಿ ಪ್ರಾರಂಭಿಸಲು ಸಮ್ಮತಿ ನೀಡಿಲ್ಲ. ಆದರೂ, ಕೆಲ ಖಾಸಗಿ ಶಾಲೆಗಳಲ್ಲಿ ಬೋಧನೆ ನಡೆಸುತ್ತಿರುವ ಮಾಹಿತಿ ಬಂದಿದೆ. ಅಂತಹ ಶಾಲೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಎಲ್ಲಾ ಜಿಲ್ಲೆಗಳ ಉಪ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
0 comments:
Post a Comment