ಬಂಟ್ವಾಳ, ಮಾ. 12, 2021 (ಕರಾವಳಿ ಟೈಮ್ಸ್) : ಮೋದಿ ನೇತೃತ್ವದ ಎನ್‍ಡಿಎ ಸರಕಾರ ಅಧಿಕಾರಕ್ಕೆ ಬಂದು ಏಳು ವರ್ಷದ ಅವಧಿಯಲ್ಲಿ ಈ ದೇಶದ ಜನಸಾಮಾನ್ಯರ ಬದುಕು ಹಸನಾಗುವ ಬದಲು ತೀರಾ ದುಸ್ತರವಾಗಿದೆ. ಚುನಾವಣಾಪೂರ್ವ ಭರವಸೆಗಳು ಬಂಡವಾಳಗಾರರ ಪರವಾಗಿ ರೂಪಿತಗೊಳ್ಳುತ್ತಿದೆ. ಒಟ್ಟಾರೆಯಾಗಿ ಸರಕಾರದÀ ಸರ್ವಾಧಿಕಾರ ಧೋರಣೆ ಈ ದೇಶದ ಬಡವರ ಮತ್ತು ಮಧ್ಯಮ ವರ್ಗವನ್ನು ತೀವ್ರ ಸಂಕಷ್ಟದಲ್ಲಿ ಸಿಲುಕಿಸಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಕಾರ್ಯದರ್ಶಿ ವಿ ಕುಕ್ಯಾನ್ ಆಕ್ರೋಶ ವ್ಯಕ್ತಪಡಿಸಿದರು.
ಬಿ ಸಿ ರೋಡಿನಲ್ಲಿ ಶುಕ್ರವಾರ ಬೆಳಿಗ್ಗೆ ಸಿಪಿಐ ಬಂಟ್ವಾಳ ತಾಲೂಕು ಸಮಿತಿ ನೇತೃತ್ವದಲ್ಲಿ ಬೆಲೆ ಏರಿಕೆ ನಿಯಂತ್ರಣಕ್ಕಾಗಿ ಕೇಂದ್ರ ಸರಕಾರವನ್ನು ಆಗ್ರಹಿಸುವ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು 2014 ರ ಮೊದಲು ಯುಪಿಎ ಸರಕಾರ ಬೆಲೆ ಏರಿಕೆ ಮಾಡುವಾಗ ಇದೇ ಬಿಜೆಪಿಯವರು ವಿರೋಧ ಪಕ್ಷದಲ್ಲಿದ್ದುಕೊಂಡು ಮೋದಿ ನೇತೃತ್ವದಲ್ಲಿ ಭಾರಿ ಪ್ರತಿಭಟನೆ ನಡೆಸುತ್ತಿದ್ದರು. ಇದೀಗ ಕಳೆದ 6 ವರ್ಷಗಳಲ್ಲಿ ಹಿಂದೆಂದೂ ಕಂಡರಿಯದಂತಹ ಬೆಲೆ ಏರಿಕೆಯಾಗುತ್ತಿದ್ದು ಯಾವನೊಬ್ಬ ಬಿಜೆಪಿ ನಾಯಕರೂ, ಕಾರ್ಯಕರ್ತರೂ ಚಕಾರ ಎತ್ತದಿರುವುದು ದುರದೃಷ್ಟಕರ ಎಂದವರು ಟೀಕಿಸಿದರು.
ಪೆಟ್ರೋಲ್, ಡೀಸೆಲ್ ಬೆಲೆ ಹಾಗೂ ಅಡುಗೆ ಅನಿಲ ಬೆಲೆಗಳು ಅನಿಯಮಿತಮಿತವಾಗಿ ಏರುತ್ತಿದ್ದು ಜನ ಪಡಬಾರದ ಕಷ್ಟ ಅನುಭವಿಸುತ್ತಿದ್ದರೂ ಮೋದಿಯವರು ಮಾತ್ರ ಏನೂ ಆಗದಂತೆ ನಟಿಸುತ್ತಿದ್ದಾರೆ. ಈ ಸರಕಾರ ಬರೇ ಸುಳ್ಳಿನಿಂದಲೇ ನಡೆಯುತ್ತಿದೆ ಎಂದವರು ಛೇಡಿಸಿದರು.
ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಮುಖ್ಯಸ್ಥೆ ಭಾರತಿ ಪ್ರಶಾಂತ್ ಮಾತನಾಡಿ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಮಹಿಳೆಯರಿಗೆ ಬದುಕಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಿಲಿಂಡರ್ ವಿತರಿಸಿ ಅಚ್ಚೇ ದಿನ್ ಬೊಗಳೆ ಬಿಟ್ಟು ಕ್ರಮೇಣ ಗ್ಯಾಸ್ ಸಬ್ಸಿಡಿಯನ್ನು ಮೊಟಕುಗೊಳಿಸುವ ಮೂಲಕ ಮಹಿಳೆಯರ ಕೈ ಸುಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು ಮಹಿಳೆಯರ ಮೇಲೆ ಅತ್ಯಂತ ಹೆಚ್ಚಿನ ದೌರ್ಜನ್ಯ ನಡೆದಿರುವುದು ಮೋದಿ ಅವಧಿಯಲ್ಲಿ ಎಂದರೆ ತಪ್ಪಿಲ್ಲ ಎಂದು ಟೀಕಿಸಿದರು.
ಎಐವೈಎಫ್ ಬಂಟ್ವಾಳ ತಾಲೂಕು ಅಧ್ಯಕ್ಷ ಪ್ರೇಮನಾಥ್ ಕೆ, ಕಾರ್ಯದರ್ಶಿ ಶ್ರೀನಿವಾಸ ಭಂಡಾರಿ, ಪ್ರಮುಖರಾದ ಪಿ ವಿಠಲ ಬಂಗೇರ, ಬಾಬು ಭಂಡಾರಿ, ಕರುಣಾಕರ ಮಾರಿಪಳ್ಳ, ಸುಧಾಕರ ಕಲ್ಲೂರು, ದಿನೇಶ್, ರಫು, ಹರ್ಷಿತ್, ಸರಸ್ವತಿ ಕೆ, ಕೇಶವತಿ, ಚಂದಪ್ಪ ನಾವೂರು, ಉಷಾ ವಿಟ್ಲ, ರಾಮ ವಿಟ್ಲ, ಪ್ರಭಾಕರ, ರಾಜಾ ಚಂಡ್ತಿಮಾರ್, ಶರೀಫ್ ಮಧ್ವ, ಎಂ ಬಿ ಭಾಸ್ಕರ, ಕಮಲಾಕ್ಷ, ದೇರಣ್ಣ ಪೂಜಾರಿ ಸುರೇಶ್ ಕುಮಾರ್ ಬಂಟ್ವಾಳ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
0 comments:
Post a Comment