ಬಂಟ್ವಾಳ, ಮಾ. 06, 2021 (ಕರಾವಳಿ ಟೈಮ್ಸ್) : ತಾಲೂಕಿನ ಬ್ರಹ್ಮರಕೂಟ್ಲು ಟೋಲ್ ಪ್ಲಾಝಾ ಬಳಿ ಸುಮಾರು 3 ಕೋಟಿ ರೂಪಾಯಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಿರ್ಮಾಣಗೊಳ್ಳುತ್ತಿರುವ ನೂತನ ರಸ್ತೆ ಕಾಮಗಾರಿ ಕಳೆದೆರಡು ವರ್ಷಗಳಿಂದ ನಿಧಾನಗತಿಯಲ್ಲಿ ಸಾಗುತ್ತಿರುವುದಲ್ಲದೆ ಕಾಮಗಾರಿ ಕೂಡಾ ಕಳಪೆ ಮಾದರಿಯಲ್ಲಿ ನಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ನೇತ್ರಾವತಿ ನದಿ ಸಮೀಪದಲ್ಲೇ ಈ ಟೋಲ್ ಪ್ಲಾಝಾ ಇದ್ದು, ರಸ್ತೆಯ ಬದಿಯಲ್ಲಿ ಯಾವುದೇ ಭದ್ರತಾ ಗೋಡೆ ಇರುವುದಿಲ್ಲ. ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. 540 ಮೀಟರ್ ಉದ್ದದ 5.5 ಮೀಟರ್ ಅಗಲದಲ್ಲಿ ನಿರ್ಮಾಣವಾಗಬೇಕಿದ್ದ ರಸ್ತೆ ಕೆಲವು ಕಡೆ ಅಂಕುಡೊಂಕಾಗಿ ನಿರ್ಮಾಣಗೊಳ್ಳುತ್ತಿದೆ ಎಂದು ದೂರಲಾಗುತ್ತಿದೆ. ಬ್ರಹ್ಮರಕೂಟ್ಲು ಟೋಲ್ ಫ್ಲಾಝಾದಲ್ಲಿ ಶುಲ್ಕ ಸಂಗ್ರಹ ಮಾಡಲು ಎರಡು ಟೋಲ್ ಸಂಗ್ರಹ ಬೂತ್‍ಗಳಿದ್ದು, ದಿನವೂ ವಾಹನಗಳ ದಟ್ಟಣೆಯಿಂದ ಟ್ರಾಫಿಕ್ ಜಾಂ ಆಗುತ್ತದೆ ಎಂಬ ಕಾರಣಕ್ಕೆ ಇದೀಗ 3ನೇ ಟೋಲ್ ಬೂತ್ ಆರಂಭಗೊಂಡು ವರ್ಷ ಎರಡು ಕಳೆದರೂ ಇನ್ನೂ ಸುಸಜ್ಜಿತವಾದ ರಸ್ತೆ ನಿರ್ಮಾಣವಾಗಿಲ್ಲ. ಹೆದ್ದಾರಿ ಪ್ರಾಧಿಕಾರವು ಸ್ಥಳದಲ್ಲಿರುವ ಹೈವೋಲ್ಟ್ 11 ಕೆವಿ ಮತ್ತು 33 ಕೆವಿ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿದ್ದು ಕೆಲವು ಕಡೆ ವಿದ್ಯುತ್ ಕಂಬಕ್ಕೆ ಆಧಾರವಾಗಿರುವ ತಂತಿಗಳನ್ನು ನೂತನವಾಗಿ ನಿರ್ಮಾಣವಾಗುವ ರಸ್ತೆಯ ಮಧ್ಯಭಾಗದಲ್ಲೇ ಅಳವಡಿಸಲಾಗಿದೆ.
ಬ್ರಹ್ಮರಕೂಟ್ಲು ಬ್ರಹ್ಮದೇವರ ಗುಡಿ ಬಳಿ ಇರುವ ಸೇತುವೆಯಿಂದ ಬಂಟರ ಭವನದ ಬಳಿ ಇರುವ ಸೇತುವೆವರೆಗೆ ಮಣ್ಣು ಹಾಕಿದ್ದು ಈಗ ಅದರ ಮೇಲೆ ಮಣ್ಣು ಚಿಪ್ ಮಾಡಿ ಡಾಮಾರು ಮಾಡಲು ಪ್ರಾಧಿಕಾರ ಹೊರಟಿದೆ. ನೇತ್ರಾವತಿ ನದಿ ಬದಿಯಲ್ಲಿ ತುಂಬೆ ಡ್ಯಾಮ್ ಬಳಿಯಲ್ಲೇ ಈ ರಸ್ತೆ ನಿರ್ಮಾಣವಾಗುತ್ತಿರುವುದರಿಂದ ರಸ್ತೆಯುದ್ದಕ್ಕೂ ತಡೆಗೋಡೆ ನಿರ್ಮಾಣ ಮಾಡಬೇಕಾಗಿದೆ. ಆದರೆ ಇದೀಗ ಅರ್ದಂಬರ್ಧ ತಡೆಗೋಡೆ ನಿರ್ಮಿಸಿ ಮೇಲಿಂದ ಮೇಲೆ ಡಾಮರ್ ಹಾಕುವಂತೆ ಕಂಡು ಬರುತ್ತಿದೆ. ಮಳೆಗಾಲದಲ್ಲಿ ನದಿ ನೀರು ತಿಂಗಳುಗಟ್ಟಲೆ ರಸ್ತೆ ಬದಿಯಲ್ಲಿ ಶೇಖರಣೆಯಾಗುವುದರಿಂದ ಹಾಕಿದ ಮಣ್ಣು ಜಾರಿಹೋಗುವ ಸಂಭವ ಇರುವುದರಿಂದ ಭಾರೀ ಅಪಾಯದ ಆತಂಕ ಸ್ಥಳೀಯರನ್ನು ಕಾಡುತ್ತಿದೆ.
ಬ್ರಹ್ಮರಕೂಟ್ಲು ಟೋಲ್ ಪ್ಲಾಝಾದಲ್ಲಿ ಶುಲ್ಕ ಸಂಗ್ರಹ ಪ್ರಾರಂಭಗೊಂಡು ಹಲವು ವರ್ಷಗಳೇ ಕಳೆದರೂ ಇಲ್ಲಿ ಇನ್ನೂ ತುರ್ತು ರಸ್ತೆ ನಿರ್ಮಾಣವಾಗಿಲ್ಲ. ವಿಐಪಿ ರಸ್ತೆಯೂ ಇಲ್ಲ. ನಿತ್ಯವೂ ಇಲ್ಲಿ ಟ್ರಾಫಿಕ್ ಜಾಂ ಜಂಜಾಟ ಬೇರೆ. ನಿತ್ಯ ಸಂಚರಿಸುವ ಅಂಬುಲೆನ್ಸ್ ವಾಹನಗಳು ಅನುಭವಿಸುವ ತೊಂದರೆಯನ್ನು ಕೇಳುವವರಿಲ್ಲದಂತಂತಾಗಿದೆ. ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ಸವಾರರ ಸಂಚಾರಕ್ಕೂ ಇಲ್ಲಿ ಯಾವುದೇ ಪ್ರತ್ಯೇಕ ವ್ಯವಸ್ಥೆ ಸಮರ್ಪಕವಾಗಿಲ್ಲ. ಈ ಎಲ್ಲ ಅವ್ಯವಸ್ಥೆಗಳ ಮಧ್ಯೆ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ರಸ್ತೆ ಕಾಮಗಾರಿ ಕೂಡಾ ಅವೈಜ್ಞಾನಿಕವಾಗಿ ನಡೆಯುತ್ತಿದ್ದು, ನಿಧಾನಗತಿಯಲ್ಲಿ ಸಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇಲ್ಲಿನ ಟೋಲ್ ಪ್ಲಾಝಾ ಅವ್ಯವಸ್ಥೆಯ ವಿರುದ್ದ ತಾಲೂಕಿನ ವಿವಿಧ ಸಂಘ-ಸಂಸ್ಥೆಗಳ ಒಕ್ಕೂಟ ವತಿಯಿಂದ ಮಾರ್ಚ್ 9 ರಂದು ಬೃಹತ್ ಸಾರ್ವಜನಿಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಇದಕ್ಕೂ ಪೊಲೀಸ್ ಮೂಲಕ ಅನುಮತಿ ನಿರಾಕರಿಸುವ ಮೂಲಕ ಅವ್ಯವಸ್ಥೆ ಮುಚ್ಚಿ ಹಾಕುವ ಷಡ್ಯಂತ್ರ ನಡೆಯುತ್ತಿದೆ ಎಂಬ ಆಕ್ರೋಶದ ಮಾತುಗಳೂ ಕೇಳಿ ಬರುತ್ತಿದೆ.
0 comments:
Post a Comment