ಬೆಳ್ತಂಗಡಿ, ಮಾ. 22, 2021 (ಕರಾವಳಿ ಟೈಮ್ಸ್) : ತಾಲೂಕಿನ ಮಾಲಾಡಿ ಸಮೀಪದಲ್ಲಿ ಸೋಮವಾರ ಬೆಳಿಗ್ಗೆ ನಡೆದ ರಸ್ತೆ ಅಪಫಾತದಲ್ಲಿ ಬಂಟ್ವಾಳ ತಾಲೂಕಿನ ಬಾಂಬಿಲ ಸಮೀಪದ ಮದ್ದ ನಿವಾಸಿ, ಯುವ ಇಂಜಿನಿಯರ್ ಮಾಝಿನ್ ಮದ್ದ (26) ಅವರು ದಾರುಣವಾಗಿ ಮೃತಪಟ್ಟಿದ್ದಾರೆ.
ಇಂಜಿನಿಯರ್ ಆಗಿರುವ ಮಾಝಿನ್ ಅವರು ಮದ್ದಡ್ಕ ಸಮೀಪ ತನ್ನ ಸ್ವಂತ ಕಚೇರಿಯನ್ನು ತೆರೆದಿದ್ದು, ಅದು ಇಂದು ಉದ್ಘಾಟನೆಗೊಳ್ಳಬೇಕಿತ್ತು. ಆದರೆ ಕಛೇರಿ ಉದ್ಘಾಟನೆಯ ಸಂತಸದ ಸಿದ್ದತೆಯಲ್ಲಿರುವಾಗಲೇ ಮಾಝಿನ್ ರಸ್ತೆ ಅಪಘಾತಕ್ಕೆ ಬಲಿಯಾಗಿರುವುದು ಇಡೀ ಮದ್ದ ಊರನ್ನೇ ಶೋಕದ ಮಡುವಿನಲ್ಲಿ ಮುಳುಗುವಂತೆ ಮಾಡಿದೆ.
ಬೆಳ್ತಂಗಡಿ ತಾಲೂಕಿನ ಮಾಲಾಡಿ ಸಮೀಪದ ತಿರುವಿನಲ್ಲಿ ಇವರ ಬೈಕಿಗೆ ಯಾವುದೋ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ ಎನ್ನಲಾಗಿದ್ದು, ಈತ ರಸ್ತೆಯಲ್ಲಿ ಬಿದ್ದಿರುವುದನ್ನು ಕಂಡ ಸ್ಥಳೀಯರು ತಕ್ಷಣ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರಾದರೂ ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಮೃತರ ತಂದೆ ಕೊಲ್ಲಿ ರಾಷ್ಟ್ರದಲ್ಲಿ ಉದ್ಯೋಗಿಯಾಗಿದ್ದಾರೆ ಎನ್ನಲಾಗಿದ್ದು, ತಂದೆ, ತಾಯಿ, ಇಬ್ಬರು ಸಹೋದರರ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
0 comments:
Post a Comment