ಬಂಟ್ವಾಳ, ಮಾ. 11, 2021 (ಕರಾವಳಿ ಟೈಮ್ಸ್) : ಇಲ್ಲಿನ ಎಸ್ ವಿ ಎಸ್ ಕಾಲೇಜು ವಿದ್ಯಾರ್ಥಿನಿಯ ಲ್ಯಾಪ್ ಟಾಪ್ ಕಳವುಗೈದು ಊರಿಗೆ ಪರಾರಿಯಾಗಲು ಯತ್ನಿಸಿದ್ದ ದಾವಣಗೆರೆ ಮೂಲಕ ವ್ಯಕ್ತಿ ಮಂಜುನಾಥ್ ಯಾನೆ ಮಂಜು (45) ನನ್ನು ಬಂಟ್ವಾಳ ನಗರ ಪೊಲೀಸರು ಹೆಡೆಮುರಿ ಕಟ್ಟಿ ಜೈಲಿಗಟ್ಟಿದ್ದಾರೆ.
ತಾಲೂಕಿನ ಅಲ್ಲಿಪಾದೆ ನಿವಾಸಿ, ಬಂಟ್ವಾಳ ಎಸ್ ವಿ ಎಸ್ ಕಾಲೇಜು ವಿದ್ಯಾರ್ಥಿನಿ ಅನನ್ಯ ಎಂಬಾಕೆ ಮಾ 8 ರಂದು ಕಾಲೇಜು ಬಿಟ್ಟು ಬಿ ಸಿ ರೋಡಿಗೆ ಬಂದು ಬಿ ಸಿ ರೋಡಿನಿಂದ ಬಸ್ಸಿನಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭ ಬಸ್ಸಿನ ಸೀಟಿನಲ್ಲಿ ಲ್ಯಾಪ್‍ಟಾಪ್ ಇಟ್ಟು ಅಂಗಡಿಗೆ ತೆರಳಿದ್ದ ವೇಳೆ ಲ್ಯಾಪ್‍ಟಾಪ್ ಕಳವುಗೈಯಲಾಗಿತ್ತು. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಕಾರ್ಯಪ್ರವೃತ್ತರಾದ ಬಂಟ್ವಾಳ ನಗರ ಠಾಣಾ ಪೊಲೀಸ್ ಇನ್ಸ್‍ಪೆಕ್ಟರ್ ಚೆಲುವರಾಜ್ ಹಾಗೂ ಕ್ರೈಂ ಎಸ್ಸೈ ಕಲೈಮಾರ್ ನೇತೃತ್ವದ ಪೊಲೀಸರು ಆರೋಪಿ ಮಂಜು ರೈಲು ಮುಖಾಂತರ ಊರಿಗೆ ತೆರಳಲು ಸಿದ್ದತೆ ನಡೆಸುತ್ತಿದ್ದಾಗ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಬಂಧಿತನಿಂದ ಕಳವುಗೈದ ಲ್ಯಾಪ್ ಟಾಪನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
0 comments:
Post a Comment