ಮಂಗಳೂರು, ಮಾ. 20, 2021 (ಕರಾವಳಿ ಟೈಮ್ಸ್) : ನಗರದ ಬಜಾಲ್ ಪ್ರದೇಶದಲ್ಲಿ ಶನಿವಾರ ನೂತನ ಅಂಚೆ ಕಛೇರಿಗೆ ಚಾಲನೆ ನೀಡಲಾಯಿತು. ಸ್ಥಳೀಯ ಕಾರ್ಪೊರೇಟರ್ ಶೋಭಾ ಪೂಜಾರಿ, ಬಜಾಲ್ ಪವಿತ್ರಾತ್ಮರ ದೇವಾಲಯದ ಧರ್ಮ ಗುರು ಆಂಡ್ರೂ ಡಿ’ಸೋಜ, ದೇವಾಲಯದ ಅಧ್ಯಕ್ಷ ದೀಪಕ್ ಡಿ’ಸೋಜ ಹಾಗೂ ಮಂಗಳೂರಿನ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ಅವರ ಉಪಸ್ಥಿತಿಯಲ್ಲಿ ಅಂಚೆ ಕಛೇರಿಯನ್ನು ಉದ್ಘಾಟಿಸಲಾಯಿತು.
ಬಜಾಲ್ ಹೋಲಿ ಸ್ಪಿರಿಟ್ ಚರ್ಚ್ ಆವರಣದ ಕಟ್ಟಡದಲ್ಲಿ ಈ ಅಂಚೆ ಕಛೇರಿ ಕಾರ್ಯ ನಿರ್ವಹಿಸುತ್ತಿದೆ. ಬಜಾಲ್ ನೂತನ ಅಂಚೆ ಕಛೇರಿಯು ಅಸ್ತಿತ್ವಕ್ಕೆ ಬಂದಿದ್ದು, ಇಲ್ಲಿನ ಪಿನ್ ಕೋಡ್ ಇನ್ನು ಮುಂದೆ 575009 ಆಗಿರುತ್ತದೆ. ಜಪ್ಪಿನಮೊಗರು, ಜೆ.ಎಂ.ರೋಡ್, ಕುತಡ್ಕ, ತಂದೋಳಿಗೆ, ಜಲ್ಲಿಗುಡ್ಡೆ, ಪಕ್ಕಲಡ್ಕ, ಬೊಲ್ಲ, ಕೆ.ಎಸ್.ಆರ್. ರೋಡ್ ಬಜಾಲ್, ಕೊಸ್ಟಲ್ ಕ್ವಾರ್ಟರ್ಸ್ ಹಾಗೂ ಅಳಪೆ ಬಜಾಲ್ ಪ್ರದೇಶಗಳಿಗೂ ಇದೇ ಪಿನ್ ಕೋಡ್ ಆಗಿರುತ್ತದೆ. ಇಲ್ಲಿನ ಸಾರ್ವಜನಿಕರು ತಮ್ಮ ವಿಳಾಸದಲ್ಲಿ ಅಂಚೆ ಬಜಾಲ್, ಪಿನ್ ಕೋಡ್ 575009 ಎಂದು ಬದಲಾಯಿಸಿಕೊಳ್ಳಬೇಕೆಂದು ಇದೇ ವೇಳೆ ಅಂಚೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ನೂತನ ಅಂಚೆ ಕಛೇರಿಯಲ್ಲಿ ಎಲ್ಲಾ ಸೇವೆಗಳು ಗಣೀಕಿಕೃತಗೊಂಡಿದ್ದು, ವಿವಿಧ ಆನ್ ಲೈನ್ ಸೇವೆಗಳೂ ಲಭ್ಯವಿವೆ. ಸಾರ್ವಜನಿಕರಿಗೆ ವಿವಿಧ ರೀತಿಯ ಉಳಿತಾಯ ಖಾತೆ, ಆವರ್ತನೀಯ ಖಾತೆ (ಆರ್.ಡಿ.), ಮಾಸಿಕ ವರಮಾನ ಯೋಜನೆ (ಎಂ.ಐ.ಎಸ್.), ಹಿರಿಯ ನಾಗರಿಕರ ಉಳಿತಾಯ ಯೋಜನೆ, ರಾಷ್ಟ್ರೀಯ ಉಳಿತಾಯ ಪತ್ರ, ಕಿಸಾನ್ ವಿಕಾಸ ಪತ್ರ, ಸಾರ್ವಜನಿಕ ಭವಿಷ್ಯ ನಿಧಿ, ಸುಕನ್ಯಾ ಸಮೃದ್ಧಿ ಯೋಜನೆ, 1,2,3,5 ವರ್ಷಗಳ ಕಾಲ ಮಿತಿ ಠೇವಣಿ ಇತ್ಯಾದಿ ಸೇವೆಗಳು ಲಭ್ಯವಿವೆ. ಇದಲ್ಲದೆ ಇಂಡಿಯಾ ಪೆÇೀಸ್ಟ್ ಪೇಮೆಂಟ್ಸ್ ಬ್ಯಾಂಕ್, ಎ.ಇ.ಪಿ.ಎಸ್ (ಆಧಾರ್ ಏನೆಬಲ್ಡ್ ಪೇಮೆಂಟ್ಸ್ ಸಿಸ್ಟಮ್) ಸೇವೆಗಳೂ ಬಜಾಲ್ ಅಂಚೆ ಕಛೇರಿಯಲ್ಲಿ ಲಭ್ಯವಿವೆ. ಆಧಾರ್ ನೊಂದಣಿ ಹಾಗೂ ಪರಿಷ್ಕರಣೆ ಸೇವೆಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು. ಗ್ರಾಹಕರಿಗೆ ನೋಂದಾಯಿತ ಅಂಚೆ, ಸ್ಪೀಡ್ ಪೆÇೀಸ್ಟ್, ಮನಿ ಆರ್ಡರ್ ಸೇವೆಗಳೂ ಬಜಾಲ್ ಅಂಚೆ ಕಛೇರಿಯಲ್ಲಿ ಲಭ್ಯವಿದೆ.
ಹೊಸ ಅಂಚೆ ಕಛೇರಿಯ ಆರಂಭೋತ್ಸವದಲ್ಲಿ ಮೊದಲ ಗ್ರಾಹಕಿಯಾಗಿ ಶ್ರೀಮತಿ ನಬಿಸಾ ಅವರ ಪುತ್ರಿ ಕು. ಜಕಿಯಾ ಅವರಿಗೆ ಸುಕನ್ಯಾ ಸಮೃದ್ದಿ ಖಾತೆಯ ಪಾಸ್ ಪುಸ್ತಕವನ್ನು ಹಸ್ತಾಂತರಿಸಲಾಯಿತು. ಈ ನೂತನ ಅಂಚೆ ಕಛೇರಿಯು ಆರಂಭವಾಗುವ ಮೂಲಕ ಈ ಭಾಗದ ಜನರ ದಶಕಗಳ ಕನಸು ನನಸಾಗಿದೆ ಎಂದು ಮಹಾನಗರ ಪಾಲಿಕೆ ಸದಸ್ಯೆ ಶೋಭಾ ಪೂಜಾರಿ ಇದೇ ವೇಳೆ ಸಂತಸ ವ್ಯಕ್ತಪಡಿಸಿದರು.
ಅಂಚೆ ಕಛೇರಿಯ ಹಿರಿಯ ನಿವೃತ್ತಿ ಅಧಿಕಾರಿಗಳಾದ ಮಾಕ್ಸೀ ಪಿಂಟೊ, ಕೆ.ಆರ್.ಎನ್. ಮೂರ್ತಿ, ಗೋಪಾಲ್, ಟಿ.ಜಿ. ನಾಯ್ಕ್, ಲಕ್ಷೀನಾರಾಯಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಮಂಗಳೂರು ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ಸ್ವಾಗತಿಸಿ, ಪ್ರಸ್ತಾವನೆಗೈದರು. ಶ್ರೀಮತಿ ಸಂಧ್ಯಾ ಹಾಗೂ ಶ್ರೀಮತಿ ಪ್ರತಿಭಾ ಶೇಟ್ ಪ್ರಾರ್ಥಿಸಿದರು. ಸಹಾಯಕ ಅಂಚೆ ಅಧೀಕ್ಷಕ ಶ್ರೀನಾಥ ಎನ್.ಬಿ. ವಂದಿಸಿದರು. ಶ್ರೀಮತಿ ಸುರೇಖಾ ಕುಡ್ವ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment