ಬಂಟ್ವಾಳ, ಮಾ. 30, 2021 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಬೆಳಿಗ್ಗೆ ಗ್ಯಾಸ್ ಟ್ಯಾಂಕರ್ ಡಿಕ್ಕಿಯಾಗಿ ಓರ್ವ ಮೃತಪಟ್ಟಿದ್ದು, ಇತರ 5 ಮಂದಿ ಕಾರು ಪ್ರಯಾಣಿಕರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೃತರನ್ನು ಮೂಲ್ಕಿ ಸಮೀಪದ ಕಿನ್ನಿಗೋಳಿ-ಐಕಳ ನಿವಾಸಿ ಗೋಪಾಲ (41) ಎಂದು ಹೆಸರಿಸಲಾಗಿದ್ದು, ಗಾಯಾಳುಗಳನ್ನು ರಘುನಾಥ, ಶೇಖರ, ರಾಜೇಶ್, ಮುದರ ಹಾಗೂ ಸಂದೀಪ್ ಎಂದು ಹೆಸರಿಸಲಾಗಿದೆ. ಇವರು ಸುಳ್ಯ ಸಮೀಪದ ನಿಂತಿಕಲ್ಲು ಎಂಬಲ್ಲಿ ಕೊರಗಜ್ಜ ದೈವದ ನರ್ತನ ಸೇವೆಗೆ ಡೋಲು ಬಾರಿಸುವ ಸೇವೆ ಸಲ್ಲಿಸಿ ಇಕೋ ಕಾರಿನಲ್ಲಿ ವಾಪಾಸು ಮನೆಗೆ ತೆರಳುತ್ತಿದ್ದ ವೇಳೆ ಮಂಗಳವಾರ ಬೆಳಿಗ್ಗೆ ಪಾಣೆಮಂಗಳೂರು ಹೆದ್ದಾರಿಯಲ್ಲಿ ಈ ಅವಘಡ ಸಂಭವಿಸಿದೆ.
ಟ್ಯಾಂಕರ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಕಾರು ಸಂಪೂರ್ಣ ಜಖಂಗೊಂಡಿದೆ. ಘಟನೆಯಲ್ಲಿ ರಘುನಾಥ ಹಾಗೂ ಗೋಪಾಲ ಎಂಬವರು ಗಂಭೀರ ಗಾಯಗೊಂಡಿದ್ದರಿಂದ ಅವರನ್ನು ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಸ್ಪಂದಿಸದೆ ಗೋಪಾಲ ಅವರು ರಾತ್ರಿ ವೇಳೆಗೆ ಮೃತಪಟ್ಟಿದ್ದಾರೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment