ಆಪರೇಶನ್ ಕಮಲ ಹಾಗೂ ಘರ್ ವಾಪ್ಸಿ ಮೂಲಕ ಸುದ್ದಿಯಾಗಿದ್ದ ವೀರಕಂಭ ಪಂಚಾಯತಿಯಲ್ಲಿ ಕೊನೆಗೂ ನಡೆಯಿತು ಅಡ್ಡ ಮತದಾನ : ಬಿಜೆಪಿ ಬೆಂಬಲಿತನ ಪಾಲಿಗೆ ಒಲಿಯಿತು ಅಧ್ಯಕ್ಷ ಪಟ್ಟ - Karavali Times ಆಪರೇಶನ್ ಕಮಲ ಹಾಗೂ ಘರ್ ವಾಪ್ಸಿ ಮೂಲಕ ಸುದ್ದಿಯಾಗಿದ್ದ ವೀರಕಂಭ ಪಂಚಾಯತಿಯಲ್ಲಿ ಕೊನೆಗೂ ನಡೆಯಿತು ಅಡ್ಡ ಮತದಾನ : ಬಿಜೆಪಿ ಬೆಂಬಲಿತನ ಪಾಲಿಗೆ ಒಲಿಯಿತು ಅಧ್ಯಕ್ಷ ಪಟ್ಟ - Karavali Times

728x90

10 February 2021

ಆಪರೇಶನ್ ಕಮಲ ಹಾಗೂ ಘರ್ ವಾಪ್ಸಿ ಮೂಲಕ ಸುದ್ದಿಯಾಗಿದ್ದ ವೀರಕಂಭ ಪಂಚಾಯತಿಯಲ್ಲಿ ಕೊನೆಗೂ ನಡೆಯಿತು ಅಡ್ಡ ಮತದಾನ : ಬಿಜೆಪಿ ಬೆಂಬಲಿತನ ಪಾಲಿಗೆ ಒಲಿಯಿತು ಅಧ್ಯಕ್ಷ ಪಟ್ಟ

ಬಂಟ್ವಾಳ, ಫೆ. 11, 2021 (ಕರಾವಳಿ ಟೈಮ್ಸ್) : ತಾಲೂಕಿನ ವೀರಕಂಭ ಗ್ರಾ ಪಂನ ಕಾಂಗ್ರೆಸ್ ಬೆಂಬಲಿತ ಮಹಿಳಾ ಸದಸ್ಯೆ ಲಲಿತಾ ಅವರು ಕಳೆದ ಭಾನುವಾರ ಬೆಳಿಗ್ಗೆ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಗೊಂಡು ಆಪರೇಶನ್ ಕಮಲದ ಸುಳಿಗೆ ಸಿಲುಕಿದ್ದರು. ಬಳಿಕ ಸಂಜೆ ವೇಳೆಗೆ ಕಾಂಗ್ರೆಸ್ ನಾಯಕರ ಮನವೊಲಿಕೆಗೆ ಕಟ್ಟುಬಿದ್ದು ಮಾಜಿ ಸಚಿವ ರಮಾನಾಥ ರೈ ನೇತೃತ್ವದಲ್ಲಿ ಮತ್ತೆ ಕಾಂಗ್ರೆಸ್ ಶಾಲಿಗೆ ಕೊರಳೊಡ್ಡಿ ಘರ್ ವಾಪ್ಸಿ ಮಾಡಿದ್ದರು. ಈ ಒಂದು ಬೆಳವಣಿಗೆ ಮೂಲಕ ಇಲ್ಲಿನ ಪಂಚಾಯತ್ ಭಾರೀ ಸುದ್ದಿಯಾಗಿತ್ತಲ್ಲದೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯೂ ಕುತೂಹಲದ ಕೇಂದ್ರ ಬಿಂದುವಾಗಿತ್ತು. ಬುಧವಾರ ನಿಗದಿಯಾಗಿದ್ದ ವೀರಕಂಭ ಪಂಚಾಯತಿನ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯರೋರ್ವರ ಅಡ್ಡ ಮತದಾನದ ಮೂಲಕ ಬಿಜೆಪಿ ಬೆಂಬಲಿತ ಅಭ್ಯರ್ಥಿ ದಿನೇಶ್ ವೀರಕಂಭ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಒಟ್ಟು 14 ಸ್ಥಾನಗಳನ್ನು ಹೊಂದಿರುವ ಇಲ್ಲಿನ ಪಂಚಾಯತ್ ನಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತರು ಸಮಾನವಾಗಿ ತಲಾ 7 ಸ್ಥಾನಗಳನ್ನು ಗಳಿಸಿದ್ದರು. ಸಾಮಾನ್ಯ ವರ್ಗಕ್ಕೆ ಇಲ್ಲಿನ ಅಧ್ಯಕ್ಷ ಸ್ಥಾನ ಮೀಸಲಾಗಿತ್ತು. ಸಹಜವಾಗಿಯೇ ಪಂಚಾಯತ್ ಅಧ್ಯಕ್ಷ ಸ್ಥಾನದ ಚುನಾವಣೆ ತೀವ್ರ ಕುತೂಹಲ ಮೂಡಿಸಿತ್ತು. ಬಿಜೆಪಿ ಬೆಂಬಲಿತರಾಗಿ ದಿನೇಶ್ ಹಾಗೂ ಕಾಂಗ್ರೆಸ್ ಪರವಾಗಿ ರಘು ಅವರು ನಾಮಪತ್ರ ಸಲ್ಲಿಸಿದ್ದರು. ಗುಪ್ತವಾಗಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ಬಿಜೆಪಿ ಬೆಂಬಲಿತ ದಿನೇಶ್ ಅವರು 8 ಮತಗಳು ಹಾಗೂ ಕೈ ಬೆಂಬಲಿತ ರಘು ಅವರು 6 ಮತಗಳನ್ನು ಪಡೆದುಕೊಂಡರು. ಯಾರೋ ಒಬ್ಬರು ಕಾಂಗ್ರೆಸ್ ಬೆಂಬಲಿತ ಸದಸ್ಯ ಅಡ್ಡ ಮತದಾನಗೈದ ಪರಿಣಾಮ ಬಿಜೆಪಿ ಬೆಂಬಲಿತ ನಿರಾಯಾಸ ವಿಜಯಿಯಾಗಿದ್ದಾರೆ. ಆಪರೇಶನ್ ಕಮಲ ಹಾಗೂ ಘರ್ ವಾಪ್ಸಿ ಘಟನೆಗೆ ಸಾಕ್ಷಿಯಾದ ಕೈ ಬೆಂಬಲಿತ ಸದಸ್ಯೆಗೆ ಬಳಿಕ ಭದ್ರತೆ ನೀಡಲಾಗಿದ್ದು, ಬುಧವಾರ ನಡೆದ ಚುನಾವಣಾ ಪ್ರಕ್ರಿಯೆಗೂ ಸೂಕ್ತ ಭದ್ರತೆಯೊಂದಿಗೇ ಆಗಮಿಸಿದ್ದರು ಎನ್ನಲಾಗಿದೆ. ಈ ಮಧ್ಯೆಯೂ ಗುಪ್ತ ಮತದಾನದಲ್ಲಿ ಅಡ್ಡ ಮತದಾನ ನಡೆದಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಯಾರು ಕೈಕೊಟ್ಟಿದ್ದಾರೆ ಎಂಬುದು ಸದ್ಯಕ್ಕೆ ನಿಗೂಢವಾಗಿದೆ. ಉಪಾಧ್ಯಕ್ಷ ಸ್ಥಾನದ ಚುನಾವಣೆ ನ್ಯಾಯಯುತವಾಗಿ ನಡೆದಿದ್ದು, ಎರಡೂ ಪಕ್ಷಗಳ ಬೆಂಬಲಿತರು ಕೂಡಾ ತಲಾ 7 ಮತಗಳನ್ನು ಪಡೆದು ಸಮಬಲ ಕಾಯ್ದುಕೊಂಡರು. ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಹುದ್ದೆಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಶೀಲಾ ವೇಗಸ್ ಹಾಗೂ ಬಿಜೆಪಿ ಬೆಂಬಲಿತೆಯಾಗಿ ಜಯಂತಿ ಪೂಜಾರಿ ನಾಮಪತ್ರ ಸಲ್ಲಿಸಿದ್ದರು. ಇಬ್ಬರು ಸಮಾನ ಮತಗಳನ್ನು ಪಡೆದ ಹಿನ್ನಲೆಯಲ್ಲಿ ಚೀಟಿ ಎತ್ತುವ ಪ್ರಕ್ರಿಯೆ ನಡೆದು ಅದೃಷ್ಟ ಪರೀಕ್ಷೆಯಲ್ಲಿ ಕಾಂಗ್ರೆಸ್ ಬೆಂಬಲಿತೆ ವಿಜಯಿಯಾಗುವ ಮೂಲಕ ಉಪಾಧ್ಯಕ್ಷರಾಗಿ ಆಯ್ಕೆಯಾದರು.
  • Blogger Comments
  • Facebook Comments

0 comments:

Post a Comment

Item Reviewed: ಆಪರೇಶನ್ ಕಮಲ ಹಾಗೂ ಘರ್ ವಾಪ್ಸಿ ಮೂಲಕ ಸುದ್ದಿಯಾಗಿದ್ದ ವೀರಕಂಭ ಪಂಚಾಯತಿಯಲ್ಲಿ ಕೊನೆಗೂ ನಡೆಯಿತು ಅಡ್ಡ ಮತದಾನ : ಬಿಜೆಪಿ ಬೆಂಬಲಿತನ ಪಾಲಿಗೆ ಒಲಿಯಿತು ಅಧ್ಯಕ್ಷ ಪಟ್ಟ Rating: 5 Reviewed By: karavali Times
Scroll to Top