ತಾಳಿಪಡ್ಪು ಮಸೀದಿಯಲ್ಲಿ ಕಳ್ಳತನ : ಆರೋಪಿ ಆಸಿಫ್ ಬಂಧನ - Karavali Times ತಾಳಿಪಡ್ಪು ಮಸೀದಿಯಲ್ಲಿ ಕಳ್ಳತನ : ಆರೋಪಿ ಆಸಿಫ್ ಬಂಧನ - Karavali Times

728x90

24 February 2021

ತಾಳಿಪಡ್ಪು ಮಸೀದಿಯಲ್ಲಿ ಕಳ್ಳತನ : ಆರೋಪಿ ಆಸಿಫ್ ಬಂಧನ

ಬಂಟ್ವಾಳ, ಫೆ. 24, 2021 (ಕರಾವಳಿ ಟೈಮ್ಸ್) : ತಾಲೂಕಿನ ಬಿ ಮೂಡ ಗ್ರಾಮದ ತಾಳಿಪಡ್ಪು ಹಿದಾಯತುಲ್ ಇಸ್ಲಾಂ ಮಸೀದಿಗೆ ನುಗ್ಗಿ ಸುಮಾರು 40 ಸಾವಿರ ರೂಪಾಯಿ ಮೌಲ್ಯದ ಸೊತ್ತುಗಳನ್ನು ಕಳವುಗೈದ ಆರೋಪಿ ಮೂಲತಃ ಕುಕ್ಕಾಜೆ ನಿವಾಸಿ ಪ್ರಸ್ತುತ ತಾಳಿಪಡ್ಪುವಿನಲ್ಲಿ ಲೀಸ್ ಮನೆಯಲ್ಲಿ ವಾಸವಾಗಿರುವ ಮಹಮ್ಮದ್ ಆಸಿಫ್ (30) ಎಂಬಾತನನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಕಳೆದ ಭಾನುವಾರ ರಾತ್ರಿ ಹಾಗೂ ಸೋಮವಾರ ಮುಂಜಾನೆಯ ಮಧ್ಯದ ಸಮಯದಲ್ಲಿ ಮಸೀದಿ ಆವರಣಕ್ಕೆ ನುಗ್ಗಿದ್ದ ಈತ ಮಸೀದಿಯ ಹಳೆಯ ತಾಮ್ರದ ಹಂಡೆ ಹಾಗೂ 5 ಬಂಡಲ್ ಕೇಬಲ್‍ಗಳನ್ನು ಕಳವುಗೈದಿದ್ದ ಎಂದು ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಸೈಯ್ಯದ್ ಫಲೂಲ್ ಎಂಬವರು ನಗರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಮರುದಿನ ರಾತ್ರಿ ಮಸೀದಿಯ ಆವರಣದಲ್ಲಿ ಆಡಳಿತ ಸಮಿತಿಯವರು ಕಳವು ಕೃತ್ಯದ ಬಗ್ಗೆ ದೇವರ ಮೇಲೆ ಅರ್ಪಿಸಿ ಸಂವಾದ ನಡೆಸುತ್ತಿದ್ದ ಸಂದರ್ಭ ಅಲ್ಲಿಗೆ ಅನುಮಾನಾಸ್ಪದವಾಗಿ ಬಂದ ಆಸೀಫ್‍ನನ್ನು ಹಿಡಿದು ವಿಚಾರಿಸಿದಾಗ ಆತ ಕಳವು ಕೃತ್ಯ ನಡೆಸಿರುವುದನ್ನು ಒಪ್ಪಿಕೊಂಡ ಹಿನ್ನಲೆಯಲ್ಲಿ ತಕ್ಷಣ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸ್ ವಿಚಾರಣೆಯ ಸಂದರ್ಭ ಕೂಡಾ ಆತ ಕಳವು ಕೃತ್ಯವನ್ನು ಒಪ್ಪಿಕೊಂಡಿದ್ದಲ್ಲದೆ ಸೊತ್ತುಗಳನ್ನು ಮಾರಾಟ ಮಾಡಿದ ಅಂಗಡಿಯ ಬಗ್ಗೆಯೂ ಮಾಹಿತಿ ನೀಡಿದ್ದಾನೆ. ಆತ ನೀಡಿದ ಮಾಹಿತಿಯಂತೆ ಪೊಲೀಸರು ಬುಧವಾರ ಬೆಳಿಗ್ಗೆ ಕಳವುಗೈದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಆಸಿಫ್ ಕೂಡಾ ಪ್ರತಿ ದೂರು ನೀಡಿದ್ದು, ಬಿ ಮೂಡ ಗ್ರಾಮದ ತಾಳಿಪಡ್ಪು ಎಂಬಲ್ಲಿ ಲೀಸ್ ಆಧಾರದಲ್ಲಿ 2 ವರ್ಷಗಳಿಂದ ವಾಸಿಸುತ್ತಿರುವ ನನ್ನ ಮನೆಗೆ ಸಂಬಂಧಿಸಿದ ವಾರಸುದಾರರು ಬಂದು ಸೇರಿಕೊಂಡಿದ್ದು. ವಾರಸುದಾರರಿಂದ ಹಣ ಬರಲು ಬಾಕಿಯಿರುವುದರಿಂದ ಸದ್ರಿ ಮನೆಯನ್ನು ಬಿಟ್ಟು ಹೋಗದೇ ಇದ್ದ ಕಾರಣಕ್ಕೆ ಬಂಟ್ವಾಳ ಪುರಸಭಾ ಸದಸ್ಯ ಹಸೈನಾರ್ ಹಾಗೂ ಇತರರು ಸೇರಿ ಮಸೀದಿಯಿಂದ ಹಂಡೆ ಕದ್ದಿರುವುದಾಗಿ ಆರೋಪಿಸಿ ಹಲ್ಲೆ ನಡೆಸಿರುವುದಾಗಿ ದೂರಿಕೊಂಡಿದ್ದಾನೆ. ಆದರೆ ಕಳವು ಆರೋಪಿಯ ದೂರು ಸಂಪೂರ್ಣ ಸುಳ್ಳಾಗಿದ್ದು, ಪೊಲೀಸರು ಸಮರ್ಪಕವಾದ ತನಿಖೆ ನಡೆಸದೆ ಆರೋಪಿಯ ದೂರು ಸ್ವೀಕರಿಸಿರುವುದು ಸರಿಯಲ್ಲ ಎಂದು ಮಸೀದಿ ಆಡಳಿತ ಸಮಿತಿಗೆ ಸಂಬಂಧಪಟ್ಟವರು ತಿಳಿಸಿದ್ದಾರೆ. ಆರೋಪಿ ಆಸೀಫ್ ಮೇಲೆ ಹಲವು ಕಳ್ಳತನ ಪ್ರಕರಣಗಳು ಜಿಲ್ಲೆಯ ವಿವಿಧೆಡೆ ದಾಖಲಾಗಿದ್ದು, ಕಳ್ಳತನ ಕೃತ್ಯಕ್ಕೆ ಸಂಬಂಧಿಸಿದಂತೆ ಜೈಲುವಾಸವನ್ನೂ ಅನುಭವಿಸಿದ ಆಸಾಮಿಯಾಗಿದ್ದಾನೆ. ಅಲ್ಲದೆ ತಾಳಿಪಡ್ಪು ಮಸೀದಿಯಲ್ಲಿ ನಡೆದ ಕಳವು ಕೃತ್ಯವನ್ನೂ ಆತ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಲ್ಲದೆ ಸೊತ್ತುಗಳನ್ನು ಮಾರಾಟ ಮಾಡಿದ ಅಂಗಡಿಯ ವಿವರವನ್ನೂ ನೀಡಿದ್ದಾನೆ. ಸೊತ್ತುಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈತ ದೂರು ನೀಡುವುದಕ್ಕೂ ಮುಂಚೆ ಮಸೀದಿ ಆಡಳಿತ ಮಂಡಳಿಯೊಂದಿಗೆ ರಾಜಿ ಪಂಚಾಯಿತಿಕೆ ನಡೆಸುವಂತೆ ಕೋರಿಕೊಂಡಿದ್ದು, ಮಸೀದಿಗೆ 40 ಸಾವಿರ ರೂಪಾಯಿ ಹಣವನ್ನೂ ನೀಡುವುದಾಗಿ ಒಪ್ಪಿಕೊಂಡಿದ್ದ. ಈ ಎಲ್ಲ ಹಿನ್ನಲೆಯ ಮಧ್ಯೆಯೂ ಪೊಲೀಸರು ಆರೋಪಿತ ನೀಡಿದ ಸುಳ್ಳು ದೂರು ಸ್ವೀಕರಿಸುವ ಕ್ರಮ ಸರಿಯಲ್ಲ ಎಂದಿದ್ದಾರೆ. ಬಂಟ್ವಾಳ ವ್ಯಾಪ್ತಿಯಲ್ಲಿ ನಿರಂತರ ಕಳ್ಳತನ ಕೃತ್ಯಗಳು ನಡೆಯುತ್ತಿದ್ದು, ಈ ಮಧ್ಯೆ ಆರೋಪಿತರ ಬಗ್ಗೆ ಪೊಲೀಸರು ಇಂತಹ ಮೃಧು ಧೋರಣೆ ತಾಳುತ್ತಿರುವುದು ಆರೋಪಿಗಳಿಗೆ ಇನ್ನಷ್ಟು ಪ್ರೋತ್ಸಾಹ ನೀಡಿದಂತಲ್ಲದೆ ಮತ್ತಿನ್ನೇನು ಎಂದು ಜನ ಪ್ರಶ್ನಿಸಿದ್ದಾರೆ. ಪ್ರಕರಣದ ಬಗ್ಗೆ ಬಂಟ್ವಾಳ ನಗರ ಠಾಣೆಯ ನೂತನ ಪೊಲೀಸ್ ಇನ್ಸ್‍ಪೆಕ್ಟರ್ ಚೆಲುವರಾಜು ತನಿಖೆ ಕೈಗೊಂಡಿದ್ದಾರೆ. ಈ ಮಧ್ಯೆ ಕಳವು ಆರೋಪಿ ಆಸಿಫ್‍ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.
  • Blogger Comments
  • Facebook Comments

0 comments:

Post a Comment

Item Reviewed: ತಾಳಿಪಡ್ಪು ಮಸೀದಿಯಲ್ಲಿ ಕಳ್ಳತನ : ಆರೋಪಿ ಆಸಿಫ್ ಬಂಧನ Rating: 5 Reviewed By: karavali Times
Scroll to Top