ನಾಟಕೀಯ ಬೆಳವಣಿಗೆಯಲ್ಲಿ ವಿಶ್ವಾಸಮತ ಕಳೆದುಕೊಂಡ ಪುದುಚೇರಿ ಕಾಂಗ್ರೆಸ್ ಸರಕಾರ : ಸಿಎಂ ನಾರಾಯಣಸ್ವಾಮಿ ರಾಜೀನಾಮೆ - Karavali Times ನಾಟಕೀಯ ಬೆಳವಣಿಗೆಯಲ್ಲಿ ವಿಶ್ವಾಸಮತ ಕಳೆದುಕೊಂಡ ಪುದುಚೇರಿ ಕಾಂಗ್ರೆಸ್ ಸರಕಾರ : ಸಿಎಂ ನಾರಾಯಣಸ್ವಾಮಿ ರಾಜೀನಾಮೆ - Karavali Times

728x90

21 February 2021

ನಾಟಕೀಯ ಬೆಳವಣಿಗೆಯಲ್ಲಿ ವಿಶ್ವಾಸಮತ ಕಳೆದುಕೊಂಡ ಪುದುಚೇರಿ ಕಾಂಗ್ರೆಸ್ ಸರಕಾರ : ಸಿಎಂ ನಾರಾಯಣಸ್ವಾಮಿ ರಾಜೀನಾಮೆ

ಪುದುಚೇರಿ, ಫೆ. 22, 2021 (ಕರಾವಳಿ ಟೈಮ್ಸ್) : ಬಹುಮತ ಸಾಬೀತಿಗೆ ವಿಫಲರಾಗಿರುವ ಸಿಎಂ ನಾರಾಯಣಸ್ವಾಮಿ ನೇತೃತ್ವದ ಪುದುಚೇರಿ ಕಾಂಗ್ರೆಸ್ ಸರಕಾರ ಸೋಮವಾರ ಪತನಗೊಂಡಿದ್ದು, ವಿ. ನಾರಾಯಣಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡುವಲ್ಲಿ ನಾರಾಯಣಸ್ವಾಮಿ ಸರಕಾರ ವಿಫಲವಾಗಿದೆ. ಕಾಂಗ್ರೆಸ್‍ನ 9 ಶಾಸಕರು, ಡಿಎಂಕೆಯ ಮೂವರು ಹಾಗೂ ಓರ್ವ ಪಕ್ಷೇತರ ಶಾಸಕ ಸೇರಿ ಸರ್ಕಾರದ ಪರವಾಗಿದ್ದರು. ರಾತ್ರಿ ಡಿಎಂಕೆಯ ಓರ್ವ ಶಾಸಕ ರಾಜೀನಾಮೆ ನೀಡಿದ್ದರಿಂದ ಕಾಂಗ್ರೆಸ್‍ಗೆ ಕೇವಲ 12 ಶಾಸಕರ ಬೆಂಬಲ ಸಿಕ್ಕಿತ್ತು. ಆದ್ರೆ ಬಹುಮತಕ್ಕೆ 14 ಮತಗಳು ಬೇಕಿತ್ತು. 33 ಸದಸ್ಯರ ಪುದುಚೇರಿಯ ವಿಧಾನಸಭೆಯಲ್ಲಿ ಮೂವರು ಕೇಂದ್ರ ಸರಕಾರದಿಂದ ನೇಮಕ ಆಗಿರುತ್ತಾರೆ. ಇನ್ನುಳಿದ 30 ಸದಸ್ಯರು ಜನರಿಂದ ನೇರವಾಗಿ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿರುತ್ತಾರೆ. 2016ರ ಚುನಾವಣೆಯಲ್ಲಿ ಕಾಂಗ್ರೆಸ್ 15 ಕ್ಷೇತ್ರಗಳಲ್ಲಿ ಗೆಲುವು ಕಂಡಿತ್ತು. ಓರ್ವ ಶಾಸಕರನ್ನ ಕಾಂಗ್ರೆಸ್ ಉಚ್ಛಾಟಿತಗೊಳಿಸಿದ್ರೆ, ಐವರು ಶಾಸಕರು ರಾಜೀನಾಮೆ ನೀಡಿದ್ದಾರೆ. ಡಿಎಂಕೆಯ ಮೂವರು ಶಾಸಕರು ಕಾಂಗ್ರೆಸ್‍ಗೆ ಬೆಂಬಲ ನೀಡಿದ್ದರು. ಆದರೆ ಭಾನುವಾರ ನಡೆದ ಅಚ್ಚರಿ ಬೆಳವಣಿಗೆಯಲ್ಲಿ ಡಿಎಂಕೆ ಓರ್ವ ಶಾಸಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಕೈ ನಾಯಕರಿಗೆ ಶಾಕ್ ನೀಡಿದರು. ಭಾನುವಾರದ ವೇಳೆ ಕಾಂಗ್ರೆಸ್ ಬಳಿ ಕೇವಲ 12 ಶಾಸಕರ ಸಮರ್ಥನೆ ಇತ್ತು. ಆರು ಶಾಸಕರ ರಾಜೀನಾಮೆ ಮತ್ತು ಒಬ್ಬರ ಅನರ್ಹತೆ ಹಿನ್ನೆಲೆ ಪುದುಚೇರಿಯ ವಿಧಾನಸಭಾ ಸದಸ್ಯರ ಸಂಖ್ಯೆ 26ಕ್ಕೆ ತಲುಪಿತ್ತು. 2016ರ ಚುನಾವಣೆಯಲ್ಲಿ ಎಂಟು ಕ್ಷೇತ್ರಗಳಲ್ಲಿ ಜಯಗಳಿಸಿದ್ದ ವಿಪಕ್ಷ ಆಲ್ ಇಂಡಿಯಾ ಎನ್.ಆರ್. ಕಾಂಗ್ರೆಸ್ ಓರ್ವ ಶಾಸಕ ಅನರ್ಹಗೊಂಡಿದ್ದರು. ಈ ಕ್ಷೇತ್ರದ ಉಪ ಚುನಾವಣೆಯಲ್ಲಿ ಡಿಎಂಕೆ ಗೆದ್ದು ಕೊಂಡಿತ್ತು. ಸದನದಲ್ಲಿ ವಿಶ್ವಾಸಮತ ಯಾಚನೆಯ ಗೊತ್ತುವಳಿ ಮಂಡಿಸಿದ ಸಿಎಂ ನಾರಾಯಣಸ್ವಾಮಿ, ತಮ್ಮ ಸರಕಾರಕ್ಕೆ ಬಹುಮತವಿದೆ ಎಂದು ವಿಧಾನಸಭೆಗೆ ತಿಳಿಸಿದರು. ಇದೇ ವೇಳೆ ಅವರು ಮಾಜಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದರು. ಆಡಳಿತಾತ್ಮಕ ವಿಷಯಗಳಲ್ಲಿ ಸರಕಾರದೊಂದಿಗೆ ಬೇಡಿ ನಿರಂತರವಾಗಿ ಸಂಘರ್ಷಕ್ಕಿಳಿದರು. ಇದರ ಹೊರತಾಗಿಯೂ ಸರಕಾರ ಕೋವಿಡ್ ಸಂಕಷ್ಟ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದೆ. ಆದಾಯ ಉತ್ಪಾದನೆ ಸೇರಿದಂತೆ ಹಲವು ವಿಷಯಗಳಲ್ಲಿ ಬೇಡಿ ಅವರು ಸರಕಾರದ ವಿರುದ್ಧ ಸಂಚು ನಡೆಸಿದ್ದಾರೆ ಎಂದು ನಾರಾಯಣ ಸ್ವಾಮಿ ಆರೋಪಿಸಿದರು. ಜನರಿಂದ ತಿರಸ್ಕಾರಕ್ಕೊಳಗಾದವರು ನಮ್ಮ ಸರಕಾರವನ್ನು ಉರುಳಿಸಲು ಸಂಚು ನಡೆಸಿದ್ದಾರೆ. ಆದರೂ ನಮ್ಮ ಸರಕಾರ ದೃಢವಾಗಿದೆ ಎಂದವರು ಹೇಳಿದ್ದರು. ಇಬ್ಬರು ಶಾಸಕರ ರಾಜೀನಾಮೆಯಿಂದಾಗಿ, 33 ಸದಸ್ಯರನ್ನೊಳಗೊಂಡ ಸದನದಲ್ಲಿ ಆಡಳಿತಾರೂಢ ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟದ ಶಾಸಕರ ಸಂಖ್ಯೆ 11ಕ್ಕೆ ಕುಸಿದಿದೆ. ಆದರೆ, ವಿರೋಧ ಪಕ್ಷ 14 ಶಾಸಕರನ್ನು ಹೊಂದಿದೆ. ಏಳು ಸ್ಥಾನಗಳು ಖಾಲಿ ಉಳಿದಿವೆ. ಮಾಜಿ ಸಚಿವರಾದ ಎ. ನಮಶಿವಾಯಂ ಮತ್ತು ಮಲ್ಲಾಡಿ ಕೃಷ್ಣರಾವ್ ಸೇರಿದಂತೆ ನಾಲ್ವರು ಕಾಂಗ್ರೆಸ್ ಶಾಸಕರು ಈಗಾಗಲೇ ರಾಜೀನಾಮೆ ನೀಡಿದ್ದಾರೆ. ನಮಶಿವಯಂ ಈಗಾಗಲೇ ಬಿಜೆಪಿ ಸೇರಿದ್ದಾರೆ. ಮತ್ತೊಬ್ಬ ಶಾಸಕರನ್ನು ಈ ಮೊದಲೇ ಅನರ್ಹಗೊಳಿಸಲಾಗಿತ್ತು.
  • Blogger Comments
  • Facebook Comments

0 comments:

Post a Comment

Item Reviewed: ನಾಟಕೀಯ ಬೆಳವಣಿಗೆಯಲ್ಲಿ ವಿಶ್ವಾಸಮತ ಕಳೆದುಕೊಂಡ ಪುದುಚೇರಿ ಕಾಂಗ್ರೆಸ್ ಸರಕಾರ : ಸಿಎಂ ನಾರಾಯಣಸ್ವಾಮಿ ರಾಜೀನಾಮೆ Rating: 5 Reviewed By: karavali Times
Scroll to Top