ಬಂಟ್ವಾಳ, ಫೆ. 04, 2021 (ಕರಾವಳಿ ಟೈಮ್ಸ್) : ತಾಲೂಕಿನ ವಿವಿಧೆಡೆ ಹೂ ಮಾರಾಟದ ಅಂಗಡಿಗಳಿಂದ ಕಳೆದ ಕೆಲ ನಿರಂತರವಾಗಿ ಮಲ್ಲಿಗೆ ಹೂವಿನ ಅಟ್ಟಿಗಳನ್ನು ಕಳವುಗೈಯುತ್ತಿದ್ದ ಪ್ರಕರಣ ಮುಂದುವರಿದಿದ್ದು, ಮಂಗಳವಾರ ರಾತ್ರಿ ಮೆಲ್ಕಾರ್ ಪರಿಸರದ ಹೂವಿನ ಅಂಗಡಿಯಲ್ಲೂ ಕೈಚಳಕ ತೋರಿದ ಕಳ್ಳನ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇದೀಗ ಕಳ್ಳತನದ ದೃಶ್ಯವುಳ್ಳ ಸಿಸಿ ಟಿವಿ ಫೂಟೇಜ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತಾಲೂಕಿನ ಬ್ರಹ್ಮರಕೂಟ್ಲು ಟೋಲ್ ಬೂತ್ ಬಳಿ ಹಾಗೂ ಬಿ ಸಿ ರೋಡು ಪೇಟೆಯ ಎರಡು ಮೂರು ಅಂಗಡಿಗಳಿಂದ ಮಲ್ಲಿಗೆ ಹೂವಿನ ಅಟ್ಟಿಗಳನ್ನು ಕಳವುಗೈಯಲಾಗಿತ್ತು. ಈ ಬಗ್ಗೆ ಹೂವಿನ ವ್ಯಾಪಾರಿಗಳು ಪೊಲೀಸರ ಗಮನ ಸೆಳೆದಿದ್ದರು.ಪೊಲೀಸರು ತನಿಖೆ ನಡೆಸುತ್ತಿರುವ ಮಧ್ಯೆ ಕಳ್ಳರು ಮೆಲ್ಕಾರ್ ಹೂವಿನ ಅಂಗಡಿಗೆ ಕನ್ನ ಹಾಕಿದ್ದಾರೆ. ನಿರಂತರ ಹೂ ಕಳ್ಳತನ ನಡೆಯುತ್ತಿರುವ ಬಗ್ಗೆ ಇದೀಗ ವ್ಯಾಪಾರಿಗಳು ಆತಂಕಿತರಾಗಿದ್ದಾರೆ.
ಮೆಲ್ಕಾರ್ ಘಟನೆಗೆ ಸಂಬಂಧಿಸಿದಂತೆ ಸಿಸಿ ಟಿವಿ ಫೂಟೇಜ್ ಆಧರಿಸಿ ಶಂಕಿತ ವ್ಯಕ್ತಿಯೋರ್ವನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಪೊಲೀಸರು ಅಧಿಕೃತವಾಗಿ ದೃಢಪಡಿಸಿಲ್ಲ.
ಹೂ ವ್ಯಾಪಾರ ನಡೆಸುವ ವ್ಯಕ್ತಿಗಳೇ ತಾಲೂಕಿನ ವಿವಿಧೆಡೆಯ ಹೂ ಅಂಗಡಿಗಳನ್ನು ಗುರುತಿಸಿ ಈ ಕೃತ್ಯದಲ್ಲಿ ತೊಡಗಿಸಿಕೊಂಡ ಬಗ್ಗೆ ವ್ಯಾಪಾರಿಗಳು ಶಂಕಿಸಿದ್ದಾರೆ. ಪೊಲೀಸ್ ಠಾಣೆಗಳ ಅನತಿ ದೂರದಲ್ಲಿ ಹಾಗೂ ಸದಾ ರಾತ್ರಿ ವೇಳೆ ಪೊಲೀಸ್ ಗಸ್ತು ಹೆಚ್ಚಿರುವ ಜಾಗದಲ್ಲೇ ಕಳ್ಳರು ಕೈಚಳಕ ತೋರುತ್ತಿರುವುದು ಜನರ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
3 February 2021
- Blogger Comments
- Facebook Comments
Subscribe to:
Post Comments (Atom)
0 comments:
Post a Comment